×
Ad

ಗುಜರಾತ್ | ವಡೋದರಾದಲ್ಲಿ ಸೇತುವೆ ಕುಸಿತ; 9 ಮಂದಿ ಮೃತ್ಯು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

Update: 2025-07-09 10:51 IST

Photo credit: X/@ANI

ವಡೋದರಾ: ವಡೋದರಾ ಜಿಲ್ಲೆಯ ಪದ್ರಾ-ಮುಜ್‌ಪುರ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸೇತುವೆ ಕುಸಿದು ಕನಿಷ್ಠ 9 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಗಂಭೀರಾ ಸೇತುವೆಯ ಒಂದು ಭಾಗ ಬೆಳಿಗ್ಗೆ ಸುಮಾರು 7.30 ರ ವೇಳೆಗೆ ಕುಸಿಯಿತು. ಆ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಟ್ರಕ್, ವ್ಯಾನ್ ಮತ್ತು ಕಾರುಗಳು ನದಿಗೆ ಉರುಳಿ ಬಿದ್ದವು ಎಂದು ತಿಳಿದುಬಂದಿದೆ.

ತಕ್ಷಣ ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಮೃತದೇಹಗಳನ್ನು ಹೊರತೆಗೆದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾದರು.

ವಡೋದರಾ ಎಸ್‌ಪಿ (ಗ್ರಾಮೀಣ) ರೋಹನ್ ಆನಂದ್ ಹಾಗೂ ಸಂಸದ ಮಿತೇಶ್ ಪಟೇಲ್ ಸಾವಿನ ಮಾಹಿತಿ ದೃಢಪಡಿಸಿದ್ದು, ಈವರೆಗೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಡೋದರಾ ಹಾಗೂ ಆನಂದ್ ಜಿಲ್ಲೆಗಳ ಅಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

 ಸ್ಥಳಕ್ಕೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡಗಳು, ಪೊಲೀಸ್ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಈ ಸೇತುವೆ ಮಧ್ಯ ಗುಜರಾತ್ ಹಾಗೂ ಸೌರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವಡೋದರಾ ನಗರದಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಸೇತುವೆ ಕುಸಿತದಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News