×
Ad

ಟ್ಯುನೀಶಿಯಾದಲ್ಲಿ 48 ಭಾರತೀಯ ಕಾರ್ಮಿಕರು ಅತಂತ್ರ; ಊಟಕ್ಕೂ ತತ್ವಾರ

Update: 2025-11-01 08:07 IST

PC: x.com/ndtvfeed

ಟ್ಯೂನಿಸ್: ಉತ್ತರ ಆಫ್ರಿಕಾದ ದೇಶಕ್ಕೆ ವಲಸೆ ಬಂದು ಅತಂತ್ರರಾಗಿರುವ ಜಾರ್ಖಂಡ್ ಮೂಲದ 48 ಮಂದಿ ಭಾರತೀಯರು ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸತ್ತಿದ್ದು, ಯಾವುದೇ ವೇತನವಿಲ್ಲದೇ ಕೆಲಸ ಮಾಡುವಂತೆ ಬಲವಂತಪಡಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಖಾಸಗಿ ಕಂಪನಿಯೊಂದರ ಮೂಲಕ ಇವರು ಟ್ಯುನೇಶಿಯಾಗೆ ಉದ್ಯೋಗಕ್ಕೆ ತೆರಳಿದ್ದರು.

ಅತಂತ್ರರಾಗಿರುವ ಕಾರ್ಮಿಕರ ಜತೆ ಇದೀಗ ಜಾರ್ಖಂಡ್ ಕಾರ್ಮಿಕ ಇಲಾಖೆ ಸಂಪರ್ಕ ಸಾಧಿಸಿದ್ದು, ಎಲ್ಲರೂ ಭಾರತಕ್ಕೆ ಹಿಂದಿರುಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

"ಟ್ಯುನೇಶಿಯಾದ ಖಾಸಗಿ ಕಂಪನಿಯೊಂದರಲ್ಲಿ ಅತಂತ್ರರಾಗಿದ್ದಾರೆ ಎನ್ನಲಾದ ವಲಸೆ ಕಾರ್ಮಿಕರ ಜತೆ ನಾವು ಮಾತನಾಡಿದ್ದು, ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆಗೂ ನಾವು ಸಂಪರ್ಕದಲ್ಲಿದ್ದು, ಅವರನ್ನು ಹುಟ್ಟೂರಿಗೆ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದೆ" ಎಂದು ವಲಸೆ ನಿಯಂತ್ರಣ ಕೋಶದ ಮುಖ್ಯಸ್ಥ ಶಿಖರ ಲಾಕ್ರಾ ಹೇಳಿದ್ದಾರೆ.

ಅತಂತ್ರರಾಗಿರುವ ಭಾರತೀಯ ಕಾರ್ಮಿಕರಿಂದ ಹೆಚ್ಚುವರಿ ಅವಧಿಗೆ ಕೆಲಸ ಮಾಡಿಸಲಾಗುತ್ತಿದ್ದು, ಉಚಿತವಾಗಿ ಕೆಲಸ ಮಾಡುವಂತೆಯೂ ಬಲವಂತಪಡಿಸಲಾಗಿದೆ. ಈ ಪರಿಸ್ಥಿತಿಯಿಂದಾಗಿ ಅವರಿಗೆ ಆಹಾರ ಖರೀದಿಸಲು ಕೂಡಾ ಹಣವಿಲ್ಲದ ಪರಿಸ್ಥಿತಿ ಇದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಈ ಪೈಕಿ ಒಬ್ಬ ಅತಂತ್ರ ಕಾರ್ಮಿಕ ಅಲ್ಲಿನ ಸ್ಥಿತಿಯ ಬಗೆಗಿನ ವಿಡಿಯೊ ಹಂಚಿಕೊಂಡಿದ್ದು, ದಿನಕ್ಕೆ 12 ಗಂಟೆ ದುಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ತಪ್ಪಿದಲ್ಲಿ ಸೆರೆಮನೆಗೆ ತಳ್ಳಲಾಗುತ್ತದೆ ಹಾಗೂ ಭಾರತಕ್ಕೆ ಎಂದೂ ಮರಳಲು ಸಾಧ್ಯವಿಲ್ಲ ಎಂಬ ಬೆದರಿಕೆ ಹಾಕಿದ್ದಾಗಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News