×
Ad

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ, ಭೂಕುಸಿತ : ಕನಿಷ್ಠ 17 ಜನರು ಮೃತ್ಯು, ಸಿಕ್ಕಿಂಗೆ ಸಂಪರ್ಕ ಕಡಿತ

Update: 2025-10-05 10:26 IST

Photo | indiatoday

ಕೋಲ್ಕತಾ,ಅ.5: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆಗಳಲ್ಲಿ ಭೂಕುಸಿತಗಳು ಸಂಭವಿಸಿದ್ದು, ಕನಿಷ್ಠ 17 ಜನರು ಮೃತಪಟ್ಟಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಸಿಕ್ಕಿಂಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶನಿವಾರ ರಾತ್ರಿ ಉತ್ತರ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಯಾಗಿದ್ದು,ಮಿರಿಕ್ ಮತ್ತು ಸುಖಿಯಾ ಪೊಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಪೋಲಿಸರು ಮತ್ತು ಸ್ಥಳೀಯಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ ಡಾರ್ಜಿಲಿಂಗ್‌ಗೆ ಭೇಟಿಯನ್ನು ನೀಡಲಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಡಾರ್ಜಿಲಿಂಗ್‌ನಲ್ಲಿ ಜೀವಗಳ ಹಾನಿಗೆ ತೀವ್ರ ನೋವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಪೀಡಿತರಿಗೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ಬಂಗಾಳ-ಸಿಕ್ಕಿಂ ಮತ್ತು ಡಾರ್ಜಿಲಿಂಗ್-ಸಿಲಿಗುರಿ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚಾರಕ್ಕೆ ತಡೆಯುಂಟಾಗಿದೆ. ಹಲವು ಕಡೆಗಳಲ್ಲಿ ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ನದಿಗಳು ಉಕ್ಕಿ ಹರಿಯುತ್ತಿವೆ.

ಕೋಲ್ಕತಾ ಮತ್ತು ಬಂಗಾಳದ ಇತರ ಭಾಗಗಳ ಪ್ರವಾಸಿಗಳು ದುರ್ಗಾ ಪೂಜೆಯ ಬಳಿಕ ಭಾರೀ ಸಂಖ್ಯೆಯಲ್ಲಿ ಡಾರ್ಜಿಲಿಂಗ್‌ಗೆ ಭೇಟಿ ನೀಡುತ್ತಾರೆ. ಹೀಗಾಗಿ ಹಲವಾರು ಪ್ರವಾಸಿಗಳು ಈ ಪ್ರಕೃತಿ ವಿಕೋಪದಲ್ಲಿ ಸಿಕ್ಕಿಕೊಂಡಿರುವ ಸಾಧ್ಯತೆಯಿದೆ.

ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಡಾರ್ಜಿಲಿಂಗ್‌ನ ಪ್ರವಾಸಿ ಸ್ಥಳಗಳನ್ನು ಮುಚ್ಚಿದೆ.

ಜಾಗರೂಕರಾಗಿರುವಂತೆ ಮತ್ತು ರಸ್ತೆ ಹಾಗೂ ಹವಾಮಾನ ಪರಿಸ್ಥಿತಿಗಳ ಬಗ್ಗೆ ಇತ್ತೀಚಿನ ಮಾಹಿತಿಗಳನ್ನು ಪಡೆದುಕೊಳ್ಳುತ್ತಿರುವಂತೆ ಅಧಿಕಾರಿಗಳು ನಿವಾಸಿಗಳು ಮತ್ತು ಪ್ರವಾಸಿಗಳಿಗೆ ಸೂಚಿಸಿದ್ದಾರೆ.

ಡಾರ್ಜಿಲಿಂಗ್ ಸಂಸದ ರಾಜು ಬಿಷ್ಟಾ ಅವರು ಭಾರೀ ಮಳೆಯಿಂದಾಗಿ ವ್ಯಾಪಕ ನಷ್ಟ, ಜೀವಹಾನಿಯ ಬಗ್ಗೆ ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಜಲಪೈಗುರಿ, ಸಿಲಿಗುರಿ ಮತ್ತು ಕೂಚ್ ಬೆಹಾರ್‌ನಂತಹ ಉತ್ತರ ಬಂಗಾಳದ ಇತರ ಭಾಗಗಳಲ್ಲಿಯೂ ಭಾರೀ ಮಳೆಯಾಗಿದ್ದು, ಅನೇಕ ಸ್ಥಳಗಳಲ್ಲಿ ನೀರು ತುಂಬಿಕೊಂಡಿದೆ.

ಹವಾಮಾನ ಕಚೇರಿಯು ಉತ್ತರ ಬಂಗಾಳ ಮತ್ತು ಸಿಕ್ಕಿಂಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಈ ಹಿಂದೆ ಎಚ್ಚರಿಕೆ ನೀಡಿತ್ತು. ಪ್ರದೇಶದಲ್ಲಿ ಅ.7ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಈ ಪ್ರದೇಶದಲ್ಲಿಯ ಹವಾಮಾನ ವೈಪರೀತ್ಯವು ನೆರೆಯ ನೇಪಾಳದಲ್ಲಿಯೂ ವ್ಯಾಪಕ ಹಾನಿಯನ್ನುಂಟುಮಾಡಿದ್ದು, ಅಲ್ಲಿ ಕಳೆದ 36 ಗಂಟೆಗಳಲ್ಲಿ 22 ಜನರು ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News