ಛತ್ತೀಸ್‌ಗಢದಲ್ಲಿ ರೈಲು ದುರಂತ | ಗೂಡ್ಸ್ ರೈಲಿಗೆ ಪ್ರಯಾಣಿಕರಿದ್ದ ರೈಲು ಢಿಕ್ಕಿ : ಕನಿಷ್ಠ ನಾಲ್ವರು ಮೃತ್ಯು
Photo credit:X/@vani_mehrotra
ಬಿಲಾಸ್‌ಪುರ (ಛತ್ತೀಸ್‌ಗಢ): ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಬಿಲಾಸ್‌ಪುರ–ಕಟ್ನಿ ಮಾರ್ಗದ ಲಾಲ್‌ಖಾದನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊರ್ಬಾ ಪ್ಯಾಸೆಂಜರ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಕೆಲವು ಬೋಗಿಗಳು ಹಳಿತಪ್ಪಿವೆ.
ಅಪಘಾತದ ತೀವ್ರತೆಗೆ ಓವರ್‌ಹೆಡ್ ತಂತಿಗಳು ಮತ್ತು ಸಿಗ್ನಲ್ ವ್ಯವಸ್ಥೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ತಕ್ಷಣವೇ ರೈಲ್ವೆ ರಕ್ಷಣಾ ತಂಡ, ಆರ್‌ಪಿಎಫ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸಹಾಯ ಒದಗಿಸಲಾಗುತ್ತಿದೆ.
ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಹಾನಿಗೊಳಗಾದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಅಪಘಾತದ ಪರಿಣಾಮ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.