ಧ್ವನಿ ಬದಲಾಯಿಸುವ ಆ್ಯಪ್ ಬಳಸಿ ಮಹಿಳೆಯಾಗಿ ಬಿಂಬಿಸಿಕೊಂಡು 7 ಮಂದಿಯ ಮೇಲೆ ಅತ್ಯಾಚಾರ!

Update: 2024-05-26 03:31 GMT

Photo: AI/ freepik

ಭೋಪಾಲ್: ಧ್ವನಿ ಬದಲಾವಣೆ ಆ್ಯಪ್ ಬಳಸಿ, ಶಿಕ್ಷಕಿಯಾಗಿ ಬಿಂಬಿಸಿಕೊಂಡು, ಯುವತಿಯರನ್ನು ಬಲೆಗೆ ಬೀಳಿಸಿಕೊಂಡು 30 ವರ್ಷದ ವ್ಯಕ್ತಿಯೊಬ್ಬ ಕನಿಷ್ಠ ಏಳು ಮಂದಿ ಆದಿವಾಸಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆದೇಶದಂತೆ ಒಂಬತ್ತು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶಿಸಲಾಗಿದೆ.

ಎಸ್ಸಿ/ಎಸ್ಟಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಬಾಲಕಿಯರಿಗೆ ಆರೋಪಿ ಬೃಜೇಶ್ ಪ್ರಜಾಪತಿ ಬಲೆ ಬೀಸುತ್ತಿದ್ದ ಎಂದು ಹೇಳಲಾಗಿದೆ. ಧ್ವನಿ ಬದಲಾವಣೆ ಆ್ಯಪ್ ಬಳಸಿಕೊಂಡು ಅರ್ಚನಾ ಮೇಡಂ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಸ್ಕಾಲರ್ ಶಿಪ್ ಅರ್ಜಿಗಳ ಸಮಸ್ಯೆ ಬಗೆಹರಿಸುವ ಸಲುವಾಗಿ ತನ್ನನ್ನು ಭೇಟಿ ಮಾಡುವಂತೆ ಕೇಳುತ್ತಿದ್ದ. ಈ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಅವರ ಮೊಬೈಲ್ ಗಳನ್ನು ಕಸಿದುಕೊಂಡು ಅವರು ನೆರವಿಗಾಗಿ ಕರೆ ಮಾಡದಂತೆ ತಡೆಯುತ್ತಿದ್ದ ಎಂದು ತಿಳಿದು ಬಂದಿದೆ.

ಇದುವರೆಗೆ ಆರೋಪಿಯಿಂದ 16 ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇವಲ ನಾಲ್ಕು ಮಂದಿಯಿಂದ ಮಾತ್ರ ಅಧಿಕೃತ ದೂರು ಬಂದಿದೆ. "ಒಬ್ಬಾಕೆ ಯುವತಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಈತನನ್ನು ಭೇಟಿ ಮಾಡಿದ್ದು, ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾನೆ" ಎಂದು ಸಿಂಧಿ ಎಸ್ಪಿ ರವೀಂದ್ರ ವರ್ಮಾ ಹೇಳಿದ್ದಾರೆ. ಇತರ ಆರು ಮಂದಿ ಕಾಲೇಜು ವಿದ್ಯಾರ್ಥಿನಿಯರಾಗಿದ್ದು, 19-20 ವರ್ಷದವರು.

ನಿರುದ್ಯೋಗಿಯಾಗಿರುವ ಪ್ರಜಾಪತಿಯ ಈ ದಂಧೆ ಈ ವರ್ಷದ ಏಪ್ರಿಲ್ ನಿಂದ ಆರಂಭವಾಗಿದ್ದರೂ, ಈತನ ವಿರುದ್ಧ ದೂರು ನೀಡಲು ವಿದ್ಯಾರ್ಥಿನಿಯರು ಹೆದರಿದ್ದರು. ಮೇ 16ರಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಮಜೂಲಿ ಠಾಣೆಗೆ ಬಂದು ದೂರು ನೀಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೇ 13ರಂದು 'ಅರ್ಚನಾ ಮೇಡಂ'ನಿಂದ ಕರೆ ಬಂದಿದ್ದು, ದಾಖಲೆಯಲ್ಲಿ ಸಹಿ ಮಾಡದೇ ಇರುವುದರಿಂದ ಸ್ಕಾಲರ್ ಶಿಪ್ ಹಣ ವಿತರಣೆಗೆ ತಡೆಯಾಗಿದೆ. ಇದನ್ನು ಸರಿಪಡಿಸಲು ನಿರ್ಜನ ಪ್ರದೇಶದಲ್ಲಿ ಭೇಟಿ ಮಾಡುವಂತೆ ಆರೋಪಿ ಕೇಳಿಕೊಂಡಿದ್ದ. ಇಲ್ಲಿಗೆ ಯುವತಿ ಬಂದ ಬಳಿಕ ಮತ್ತೊಂದು ಕರೆ ಬಂದಿತ್ತು. ಕರೆ ತರಲು ಮಗನನ್ನು ಕಳುಹಿಸುವುದುದಾಗಿ ಹೇಳಲಾಯಿತು. ಮೋಟರ್ಸೈಕಲ್ ನಲ್ಲಿ ಬಂದ ವ್ಯಕ್ತಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಫೋನ್ ಕಸಿದುಕೊಂಡ ಎಂದು ಸಂತ್ರಸ್ತೆಯ ದೂರನ್ನು ಆಧರಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. ತಾಂತ್ರಿಕ ತಜ್ಞರ ನೆರವಿನಿಂದ ಆರೋಪಿ ಪ್ರಜಾಪತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News