×
Ad

ಅನಿವಾಸಿ ಭಾರತೀಯನನ್ನು ವರಿಸಲು ಪಂಜಾಬ್ ಗೆ ಆಗಮಿಸಿದ್ದ 71 ವರ್ಷದ ಅಮೆರಿಕ ಪ್ರಜೆಯ ಹತ್ಯೆ

Update: 2025-09-17 22:10 IST

ಲೂಧಿಯಾನ: ಬ್ರಿಟನ್ ಮೂಲದ 75 ವರ್ಷದ ಅನಿವಾಸಿ ಭಾರತೀಯನನ್ನು ವರಿಸಲು ಅಮೆರಿಕದ ಸಿಯಾಟಲ್ ನಿಂದ ಲೂಧಿಯಾನಾಗೆ ಆಗಮಿಸಿದ್ದ ಭಾರತೀಯ ಮೂಲದ 71 ವರ್ಷದ ಅಮೆರಿಕ ಪ್ರಜೆಯನ್ನು ಆಕೆ ಲೂಧಿಯಾನಾಗೆ ಆಗಮಿಸಿದ ಕೂಡಲೇ ಹತ್ಯೆಗೈಯ್ಯಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ಜುಲೈನಲ್ಲಿ ನಡೆದಿದ್ದ ಈ ಘಟನೆಯು ಇತ್ತೀಚೆಗೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಲೂಧಿಯಾನ ಪೊಲೀಸರು, ಶಂಕಿತ ಆರೋಪಿಗಳ ಹೆಸರನ್ನು ಎಫ್ಐಆರ್ ನಲ್ಲಿ ದಾಖಲಿಸಿಕೊಂಡಿದ್ದಾರೆ.

ಬ್ರಿಟನ್ ಮೂಲದ, ಮೂಲತಃ ಲೂಧಿಯಾನ ನಿವಾಸಿಯಾದ ಚರಣ್ ಜಿತ್ ಸಿಂಗ್ ಗ್ರೇವಾಲ್ ಆಮಂತ್ರಣದ ಮೇರೆಗೆ ರೂಪಿಂದರ್ ಕೌರ್ ಪಂಧೇರ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಚರಣ್ ಜಿತ್ ಸಿಂಗ್ ಗ್ರೇವಾಲ್ ರನ್ನು ವರಿಸಬೇಕಿತ್ತು ಎಂದೂ ಅವರು ಹೇಳಿದ್ದಾರೆ.

ಆದರೆ, ಆಕೆಯನ್ನು ಗ್ರೇವಾಲ್ ನೇ ಹತ್ಯೆಗೈದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಹಣಕಾಸಿನ ವ್ಯವಹಾರ ಈ ಹತ್ಯೆಗೆ ಕಾರಣವಾಗಿದ್ದು, ಪಂಧೇರ್ ಅವರು ಭಾರತಕ್ಕೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ, ಗ್ರೇವಾಲ್ ಖಾತೆಗೆ ಗಮನಾರ್ಹ ಪ್ರಮಾಣದ ಮೊತ್ತವನ್ನು ವರ್ಗಾಯಿಸಿದ್ದರು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತ ಆರೋಪಿಗಳ ಪೈಕಿ ಗ್ರೇವಾಲ್ ಕೂಡಾ ಸೇರಿದ್ದಾನೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ (ಲೂಧಿಯಾನ ಪೊಲೀಸ್ ವಲಯ) ಸತಿಂದರ್ ಸಿಂಗ್ ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News