ದಿಲ್ಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ
Update: 2026-02-09 10:07 IST
Photo| indiatoday
ಹೊಸದಿಲ್ಲಿ: ದಿಲ್ಲಿಯಾದ್ಯಂತ 9 ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಕರೆ ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ದಿಲ್ಲಿಯ ಪ್ರಮುಖ ಶಾಲೆಗಳಿಗೆ ಬೆಳಿಗ್ಗೆ 8:30 ರಿಂದ 9ರ ನಡುವೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳಗಳು ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ದಿಲ್ಲಿಯಂತಹ ಮಹಾನಗರಗಳಲ್ಲಿ ಹುಸಿ ಬಾಂಬ್ ಬೆದರಿಕೆಗಳು ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸಿದೆ.
ಇದಕ್ಕೂ ಮೊದಲು, ಜನವರಿ 29ರ ಬೆಳಿಗ್ಗೆ ದಿಲ್ಲಿಯ ಐದು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಭದ್ರತಾ ಸಂಸ್ಥೆಗಳು ವ್ಯಾಪಕವಾಗಿ ಶೋಧ ನಡೆಸಿದ ನಂತರ ಆ ಬೆದರಿಕೆಗಳು ಸುಳ್ಳು ಎಂಬುದು ಬಹಿರಂಗವಾಗಿದೆ.