×
Ad

ಡ್ರೋನ್ ನಲ್ಲಿ ಸೆರೆಯಾದ ಕಾಶ್ಮೀರದ ಗುಲ್ ಮಾರ್ಗ್‌ನ ರುದ್ರರಮಣೀಯ ಚಳಿಗಾಲ

Update: 2024-02-04 22:03 IST

Photo: PTI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ತನ್ನ ರುದ್ರರಮಣೀಯ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ರವಿವಾರ ಇಲ್ಲಿನ ತಾಪಮಾನ -7 ಡಿಗ್ರಿ ಸೆಲ್ಷಿಯಸ್ ಗೆ ಕುಸಿದಿದ್ದು, ಮೈಕೊರೆಯುವ ಚಳಿ ಮನೆ ಮಾಡಿದೆ. ನಿರಂತರ ಸುರಿಯುತ್ತಿರುವ ಹಿಮ ರಸ್ತೆಗಳನ್ನು ಜಾರಿಬಂಡೆಯಂತಾಗಿಸಿದೆ. ಮರಗಳು, ರಸ್ತೆಗಳ ಮೇಲೆಲ್ಲ ಬಿದ್ದಿರುವ ಹಿಮವು ಕಣ್ಣಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. ಕಾಶ್ಮೀರದ ಸಮತಟ್ಟಾದ ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದ ಹಿಮ ಸುರಿಯುತ್ತಿದ್ದರೆ, ಎತ್ತರದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಿಮ ಬೀಳುತ್ತಿದೆ.

ಈ ಎಲ್ಲ ಮನೋಹರ ದೃಶ್ಯಗಳು ಡ್ರೋನ್ ನಲ್ಲಿ ಸೆರೆಯಾಗಿದ್ದು, ವಿಶ್ವದ ಅತ್ಯಂತ ಜನಪ್ರಿಯ ಸ್ಕೀಯಿಂಗ್ ತಾಣವಾದ ಗುಲ್ಮಾರ್ಗ್ ಪ್ರವಾಸಿಗರನ್ನು ಮತ್ತೆ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಹಿಮದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಿಂದ ಒಂದು ದಿನದ ಮಟ್ಟಿಗೆ ಎಲ್ಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಾಹನಗಳ ಸಂಚಾರವು ನಿಧಾನಗತಿಯದ್ದಾಗಿದ್ದು, ರಸ್ತೆಗಳು ಜಾರುತ್ತಿವೆ. ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಪ್ರಾಧಿಕಾರಗಳು ರಸ್ತೆ ಮೇಲಿನ ಮಂಜನ್ನು ತೆರವುಗೊಳಿಸುತ್ತಿವೆ.

ತನ್ನ ಮನಮೋಹಕ ಪ್ರಾಕೃತಿಕ ಹಿನ್ನೆಲೆಗೆ ಮತ್ತು ಸ್ಕೀಯಿಂಗ್ ತಾಣಕ್ಕೆ ಹೆಸರಾದ ಗುಲ್ಮಾರ್ಗ್ ನಲ್ಲಿ ಸುರಿಯುತ್ತಿರುವ ಹಿಮದಿಂದಾಗಿ ಅದರ ಪ್ರಾಕೃತಿಕ ಸೌಂದರ್ಯ ಮತ್ತಷ್ಟು ಇಮ್ಮಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸಿಗರೊಬ್ಬರು, “ನಮಗೆ ಭಾರಿ ಪ್ರಮಾಣದ ಮಂಜು ಲಭ್ಯವಿದೆ. ನಾವದನ್ನು ಆನಂದಿಸುತ್ತಿದ್ದು, ಇದೊಂದು ಅದ್ಭುತ ಅನುಭವವಾಗಿದೆ. ನಾವು ಮತ್ತಷ್ಟು ಮಂಜನ್ನು ನಿರೀಕ್ಷಿಸುತ್ತಿದ್ದೇವೆ. ಹೀಗಾಗಿ ಗುಲ್ಮಾರ್ಗ್ ಗೆ ಬಂದು ಸ್ಕೀಯಿಂಗ್ ಅನ್ನು ಆನಂದಿಸಿ. ಇದು ಕಾಲು, ಶರೀರ ಮತ್ತೆಲ್ಲ ದೈಹಿಕ ಸದೃಢತೆಗೂ ರೋಚಕ ಕ್ರೀಡೆ. ಇದೊಂದು ಅದ್ಭುತ ಕ್ರೀಡೆ. ನೀವೆಲ್ಲರೂ ಬಂದು, ಇಲ್ಲಿ ಸ್ಕೀಯಿಂಗ್ ಮಾಡಿ ನಾನು ಎಂದು ಹುರಿದುಂಬಿಸಲು ಬಯಸುತ್ತೇನೆ” ಎಂದು ANI ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಕಾಶ್ಮೀರದ ಗಿರಿ ಮತ್ತು ಕಣಿವೆ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರಗಳು ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ 24 ಗಂಟೆಗಳ ಕಾಲ ಈ ಭಾಗದಲ್ಲಿ ಅನಗತ್ಯವಾಗಿ ಸಂಚರಿಸದಂತೆ ಮನವಿ ಮಾಡಿವೆ.

40 ದಿನಗಳ ಅತ್ಯಂತ ಕಠಿಣ ಚಳಿಗಾಲದ ಅವಧಿಯಾದ ‘ಚಿಲ್ಲಾ-ಇ-ಕಲನ್’ ಈ ವಾರದ ಆರಂಭದಲ್ಲಷ್ಟೇ ಅಂತ್ಯಗೊಂಡಿದ್ದು, ಕಾಶ್ಮೀರದಲ್ಲಿ ಶೀತ ಮಾರುತ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News