ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಬಗ್ಗೆ ಭರವಸೆ ಕಳೆದುಕೊಂಡಿದ್ದೇನೆ: ಸಿಎಂ ಉಮರ್ ಅಬ್ದುಲ್ಲಾ
ಉಮರ್ ಅಬ್ದುಲ್ಲಾ (Photo: PTI)
ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪನೆ ಬಗೆಗಿನ ನಿರೀಕ್ಷೆ ಮಬ್ಬಾಗುತ್ತಿದೆ ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
"ರಾಜ್ಯದ ಸ್ಥಾನಮಾನ ಪುನಸ್ಥಾಪನೆ ಬಗ್ಗೆ ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ನನಗೆ ಆಶಾವಾದ ಇತ್ತು. ಆದರೆ ಇದೀಗ ಆ ಭಾವನೆ ಕಡಿಮೆಯಾಗುತ್ತಿದೆ. ನೀವು ನಮ್ಮನ್ನು ಕಾಯಿಸಿದಷ್ಟೂ ಮತ್ತು ರಾಜ್ಯ ಸ್ಥಾನಮಾನವನ್ನು ವಿಳಂಬಿಸಿದಷ್ಟೂ, ನಮ್ಮನಿರೀಕ್ಷೆ ಕಡಿಮೆಯಾಗುತ್ತಾ ಹೋಗುತ್ತದೆ" ಎಂದು ವಿಧಾನಸಭೆಯಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ನಿಶ್ಚಿತ ಕಾಲಮಿತಿಯಲ್ಲಿ ರಾಜ್ಯದ ಸ್ಥಾನಮಾನವನ್ನು ಪುನಸ್ಥಾಪನೆ ಮಾಡದಿದ್ದರೆ, ಸಿಎಂ ಹುದ್ದೆಗೆ ರಾಜೀನಾಮೆ ನಿಡುವುದಾಗಿ ರವಿವಾರ ಸಂದರ್ಶನವೊಂದರಲ್ಲಿ ಸಿಎಂ ಹೇಳಿದ್ದರು. ಈ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಉತ್ತರಿಸಲು ಸಿಎಂ ನಿರಾಕರಿಸಿದರು.
ಆದಾಗ್ಯೂ ರಾಜ್ಯದ ಸ್ಥಾನಮಾನ ನೀಡದಿದ್ದರೆ ಚುನಾಯಿತ ಸರ್ಕಾರಕ್ಕೆ ಸುಗಮವಾಗಿ ಕಾರ್ಯನಿರ್ವಹಿಸಲು ತಡೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. "ನಮ್ಮ ಕೆಲಸಗಳನ್ನು ಕಾರ್ಯಗತಗೊಳಿಸಲು ಅಡ್ಡಿಯಾಗದಿದ್ದರೆ, ರಾಜ್ಯದ ಸ್ಥಾನಮಾನ ನೀಡುವಂತೆ ಕೇಳಲು ನಾನು ಹುಚ್ಚನೇ? ಕೇಂದ್ರಾಡಳಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವುದು ಸುಲಭವಾಗಿದ್ದರೆ, ದೇಶದ ಎಲ್ಲ ರಾಜ್ಯಗಳು ಕೂಡ ಕೇಂದ್ರಾಡಳಿತ ಪ್ರದೇಶವಾಗಲು ಕೇಳಿಕೊಳ್ಳುತ್ತಿದ್ದವು ಹಾಗೂ ನಾವು ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡುತ್ತಿರಲಿಲ್ಲ" ಎಂದು ಹೇಳಿದರು.