×
Ad

ಸೋನಂ ವಾಂಗ್ಚುಕ್ ಬಂಧನ : ಎನ್‌ಎಸ್‌ಎ ಕಾಯ್ದೆಯಡಿ ಜೈಲಿಗೆ

ಲೇಹ್‌ನಲ್ಲಿ ಇಂಟರ್‌ವೆಟ್ ಸೇವೆ ಸ್ಥಗಿತ, ಕರ್ಫ್ಯೂ ಮುಂದುವರಿಕೆ

Update: 2025-09-26 16:13 IST

ಹೊಸದಿಲ್ಲಿ,ಸೆ.26: ಎರಡು ದಿನಗಳ ಹಿಂದೆ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಾಂಗ್ಚುಕ್ ವಿರುದ್ಧ ಕಠೋರವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಚೋದನಕಾರಿ ಹೇಳಿಕೆಗಳ ಜನರನ್ನು ಹಿಂಸೆಗೆ ಪ್ರಚೋದಿಸಿದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.

ಲಡಾಖ್‌ನ ಪೊಲೀಸ್ ಮಹಾನಿರ್ದೇಶಕ ಎಸ್.ಡಿ.ಸಿಂಗ್ ಜಮಾವಲ್ ನೇತೃತ್ವದ ಪೊಲೀಸ್ ತಂಡವು ವಾಂಗ್ಚುಕ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ. ವಾಂಗ್ಚುಕ್ ಅವರು ಮಧ್ಯಾಹ್ನ 2:00 ಗಂಟೆಯ ವೇಳೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಆದರೆ ಅವರಿಗೆ ಅನುಮತಿಯನ್ನು ನಿರಾಕರಿಸಲಾಗಿತ್ತು.

ಸೋನಂ ಅವರನ್ನು ಶನಿವಾರದೊಳಗೆ ಲಡಾಕ್‌ನಿಂದ ಹೊರಗಿರುವ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಾಂಗ್ಚುಕ್ ಬಂಧನದ ಹಿನ್ನೆಲೆಯಲ್ಲಿ ವದಂತಿಗಳು ಹರಿದಾಡುವುದನ್ನು ತಡೆಯಲು ಕೇಂದ್ರ ಸರಕಾರವು ಇಂಟರ್‌ನೆಟ್ ಸೇವೆಗಳನ್ನು ಅಮಾನತುಗೊಳಿಸಿದೆ. ಗುರುವಾರ ಹೇರಲಾಗಿದ್ದ ಕರ್ಫ್ಯೂವನ್ನು ಎರಡನೇ ದಿನವಾದ ಶುಕ್ರವಾರವೂ ಮುಂದುವರಿಸಲಾಗಿದೆ. ಲೇಹ್‌ನಲ್ಲಿನ ಎಲ್ಲಾ ಶಾಲಾ, ಕಾಲೇಜ್‌ಗಳಿಗೆ ಸೆಪ್ಟೆಂಬರ್ 27ರವರೆಗೆ ರಜೆ ನೀಡಲಾಗಿದೆ.

ಲಡಾಕ್‌ಗೆ ಪ್ರತ್ಯೇಕ ರಾಜ್ಯಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಹೋರಾಡುತ್ತಿರುವ ಪ್ರತಿಭಟನಕಾರರ ಗುಂಪೊಂದು ಲೇಹ್‌ನಲ್ಲಿರುವ ಬಿಜೆಪಿಯ ಮುಖ್ಯ ಕಾರ್ಯಾಲಯ ಹಾಗೂ ಲಡಾಕ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ ಸಚಿವಾಲಯದ ಬಳಿ ಹಿಂಸಾಚಾರಕ್ಕಿಳಿದ ಬಳಿಕ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದರು.

ವಾಂಗ್ಚುಕ್ ಹಾಗೂ ಅವರ ಬೆಂಬಲಿಗರು ನಡೆಸುತ್ತಿರುವ ನಿರಶನ ಬುಧವಾರ 15 ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು.

ಗುರುವಾರದಂದು ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ವಾಂಗ್ಚುಕ್ ನಡೆಸುತ್ತಿರುವ ‘ಲಡಾಖ್ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಳವಳಿ (ಎಸ್‌ಇಸಿಎಂಓಎಲ್) ಎನ್‌ಜಿಓ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಿತ್ತು. ಕೇಂದ್ರ ಸರಕಾರವು ತನ್ನನ್ನು ಜೈಲಿಗೆ ತಳ್ಳಲು ಸಂಚು ರೂಪಿಸುತ್ತಿದೆಯೆಂದು ವಾಂಗ್ಚುಕ್ ಅವರು ಗುರುವಾರ ಆಪಾದಿಸಿದ್ದರು. ‘ಲಡಾಕ್‌ಗೆ ರಾಜ್ಯದ ಸ್ಥಾನಮಾನ ಕೊಡಿಸುವ ತನ್ನ ಧ್ಯೇಯವನ್ನು ಸಾಧಿಸಲು ಜೈಲಿಗೆ ಹೋಗಲೂ ತಾನು ಸಿದ್ಧ’ ಎಂದು ಅವರು ಹೇಳಿದ್ದರು.

ಎರಡು ದಿನಗಳ ಹಿಂದೆ ಲಡಾಖ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದೆ ತನ್ನ ಕೈವಾಡವಿದೆಯೆಂಬ ಕೇಂದ್ರ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶದ ಆರೋಪಗಳನ್ನು ನಿರಾಕರಿಸಿತ್ತು. 2018ರಲ್ಲಿ ರಾಮನ್ ಮ್ಯಾಗ್ಸೆಸೆ ಪುರಸ್ಕೃತರಾದ ವಾಂಗ್ಚುಕ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ವಾಂಗ್ಚುಕ್‌ ಅವರ ಬಂಧನವನ್ನು ಲಡಾಕ್‌ನ ಲೋಕಸಭಾ ಸದಸ್ಯ ಹಾಜಿ ಹನೀಫಾ ಖಂಡಿಸಿದ್ದಾರೆ. ‘‘ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದುದಕ್ಕಾಗಿ ವಾಂಗ್ಚುಕ್ ಅವರನ್ನು ಬಂಧಿಸಿರುವುದಾದರೆ, ನಾವದನ್ನು ತೀವ್ರವಾಗಿ ಖಂಡಿಸುತ್ತೇವೆ’’ ಎಂದು ಹನೀಫಾ ಹೇಳಿದ್ದಾರೆ.

ವಾಂಗ್ಚುಕ್ ಅವರ ಬಂಧನ ದುರದೃಷ್ಟಕರ ಅದರೆ ಅಚ್ಚರಿಕರವಲ್ಲವೆಂದು ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ. ಆದರೆ ಕೇಂದ್ರ ಸರಕಾರವು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಲು ಯಾಕೆ ವಿಫಲವಾಗಿದೆ ಎಂಬುದನ್ನು ಅರಿತುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಅಬ್ದುಲ್ಲಾ ಅವರು ತಿಳಿಸಿದ್ದಾರೆ.

ಗೌರವಾನ್ವಿತ ಹಾಗೂ ಗಾಂಧಿವಾದಿ ಹೋರಾಟಗಾರರಾದ ವಾಂಗ್ಚುಕ್ ಅವರ ಬಂಧನವು ಅನಪೇಕ್ಷಣೀಯ ಎಂದು ನಾಯಕ ಜಿ.ಎ. ಮೀರ್ ತಿಳಿಸಿದ್ದಾರೆ.

ಜಾಮೀನಿಗೆ ಅವಕಾಶವಿಲ್ಲ?

ಸೋನಂ ವಾಂಗ್ಚುಕ್ ಅವರನ್ನು ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಬಂಧಿಸಲ್ಪಟ್ಟಿರುವುದರಿಂದ ಅವರಿಗೆ ಜಾಮೀನು ದೊರೆಯುವ ಅವಕಾಶವಿಲ್ಲದೆ ದೀರ್ಘಸಮಯದವರೆಗೆ ಜೈಲಿನಲ್ಲಿರಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News