‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್' ನ ‘ಪತ್ರಿಕಾ ಸ್ವಾತಂತ್ರ್ಯ ಬೇಟೆಗಾರರು’ ಪಟ್ಟಿಯಲ್ಲಿ ಅದಾನಿ ಗ್ರೂಪ್ ಮತ್ತು OpIndia
ಗೌತಮ್ ಅದಾನಿ | Photo Credit : PTI
ಹೊಸದಿಲ್ಲಿ: 180 ದೇಶಗಳ ಪೈಕಿ ಭಾರತವು 151ನೇ ಸ್ಥಾನದಲ್ಲಿರುವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಕಟಿಸುವ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಕಳೆದ ತಿಂಗಳು ಪ್ರಕಟಿಸಿರುವ ‘ಪ್ರೆಸ್ ಫ್ರೀಡಂ ಪ್ರಿಡೇಟರ್ಸ್ ಅಥವಾ ಪತ್ರಿಕಾ ಸ್ವಾತಂತ್ರ್ಯ ಬೇಟೆಗಾರರು’ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿಯವರ ಅದಾನಿ ಗ್ರೂಪ್ ಮತ್ತು ಹಿಂದುತ್ವವಾದಿ ಜಾಲತಾಣ OpIndia ಸೇರಿವೆ ಎಂದು thewire.in ವರದಿ ಮಾಡಿದೆ.
ಈ ಪಟ್ಟಿಯು ಜಾಗತಿಕವಾಗಿ ಪತ್ರಕರ್ತರಿಗೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆಯನ್ನು ಒಡ್ಡುವ ವ್ಯಕ್ತಿಗಳು,ಸಂಸ್ಥೆಗಳು ಮತ್ತು ಸರಕಾರಗಳನ್ನು ಒಳಗೊಂಡಿದೆ.
ಜಾಗತಿಕ ‘ಬೇಟೆಗಾರ’ರಲ್ಲಿ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೈನೀಸ್ ಕಮುನಿಸ್ಟ್ ಪಾರ್ಟಿ,ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಬೆಲಾರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರು ಸೇರಿದ್ದಾರೆ.
ಸುಮಾರು 220 ಪತ್ರಕರ್ತರನ್ನು ಕೊಂದಿರುವ ಇಸ್ರೇಲ್ ಸೇನೆ, ಮ್ಯಾನ್ಮಾರ್‌ನ ಸ್ಟೇಟ್ ಪೀಸ್ ಆ್ಯಂಡ್ ಸೆಕ್ಯುರಿಟಿ ಕಮಿಷನ್,ಬುರ್ಕಿನಾ ಫಾಸೋದ ಮಿಲಿಟರಿ ಆಡಳಿತ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲು ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಬಳಸುವ ಬಿಲಿಯಾಧೀಶ ಎಲಾನ್ ಮಸ್ಕ್ ಅವರೂ ಈ ಪಟ್ಟಿಯಲ್ಲಿದ್ದಾರೆ.
ಅದಾನಿ ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರ ಎಂದು ಬೆಟ್ಟು ಮಾಡಿರುವ ಆರ್‌ಎಸ್‌ಎಫ್, ಅದಾನಿ ಗ್ರೂಪ್ ಮತ್ತು ಅದರ ಅಂಗಸಂಸ್ಥೆಗಳು ಸ್ವತಂತ್ರ ಪತ್ರಿಕೋದ್ಯಮದ ಧ್ವನಿಯಡಗಿಸುವ ಉದ್ದೇಶದಿಂದ 2017ರಿಂದ 15ಕ್ಕೂ ಅಧಿಕ ಪ್ರಮುಖ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಸೇರಿದಂತೆ ಸುಮಾರು 10 ಮೊಕದ್ದಮೆಗಳನ್ನು ದಾಖಲಿಸಿವೆ ಎಂದು ಹೇಳಿದೆ. ದಿ ವೈರ್,ನ್ಯೂಸ್‌ಲಾಂಡ್ರಿ ಮತ್ತು ಎಚ್‌ಡಬ್ಲ್ಯು ನ್ಯೂಸ್ ಹಾಗೂ ಸ್ವತಂತ್ರ ಪತ್ರಕರ್ತ ರವೀಶ್ ಕುಮಾರ್ ರವರು ಅದಾನಿಯ 2025ರ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಅದು ಹೇಳಿದೆ.
ಒಪಿಇಂಡಿಯಾವನ್ನು ‘ಮಾರಣಾಂತಿಕ ಅಸ್ತ್ರ’ ಎಂದು ಬಣ್ಣಿಸಿರುವ ಆರ್‌ಎಸ್‌ಎಫ್, ಅದು ಸರಕಾರವನ್ನು ಟೀಕಿಸುವ ಪತ್ರಕರ್ತರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಮತ್ತು ಮಾಧ್ಯಮಗಳ ಬಗ್ಗೆ ಸಾರ್ವಜನಿಕ ಅಪನಂಬಿಕೆಯನ್ನು ಹರಡುತ್ತಿದೆ ಎಂದು ಹೇಳಿದೆ.
ಒಪಿಇಂಡಿಯಾ 2025ರಲ್ಲಿ ಸರಕಾರವನ್ನು ಟೀಕಿಸುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು 96 ಲೇಖನಗಳನ್ನು ಪ್ರಕಟಿಸಿದೆ ಎಂದು ಆರ್‌ಎಸ್‌ಎಫ್ ಎತ್ತಿ ತೋರಿಸಿದೆ.
ಸ್ವತಂತ್ರ ಮಾಧ್ಯಮ ಸಂಸ್ಥೆ ‘ದಿ ನ್ಯೂಸ್ ಮಿನಿಟ್’ನ ಸಹಸ್ಥಾಪಕಿ ಮತ್ತು ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ತನ್ನ ಇಂಪ್ಯಾಕ್ಟ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಬಳಿಕ ಅ.23ರಂದು ಒಪಿಇಂಡಿಯಾ ಅವರ ವಿರುದ್ಧ ಅವಹೇಳನಕಾರಿ ಲೇಖನವನ್ನು ಪ್ರಕಟಿಸಿತ್ತು ಎಂದೂ ಆರ್‌ಎಸ್‌ಎಫ್ ಹೇಳಿದೆ.