×
Ad

ಆದಿವಾಸಿ ನಾಯಕನೀಗ ಛತ್ತೀಸ್‌ಗಡದ ನೂತನ ನಿಯೋಜಿತ ಮುಖ್ಯಮಂತ್ರಿ

Update: 2023-12-10 19:50 IST

ವಿಷ್ಣು ದಿಯೋ ಸಾಯಿ | Photo : PTI 

ರಾಯ್ಪುರ: ಸುದೀರ್ಘ ಒಂದು ವಾರದ ರಹಸ್ಯದ ನಂತರ, ರವಿವಾರ ಛತ್ತೀಸ್‌ಗಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ವಿಷ್ಣು ದಿಯೋ ಸಾಯಿ ಆಯ್ಕೆಯಾಗಿದ್ದಾರೆ.

1990ರಿಂದ ಬಿಜೆಪಿಯ ಪ್ರಮುಖ ಆದಿವಾಸಿ ನಾಯಕರಾಗಿರುವ ವಿಷ್ಣು ದಿಯೋ ಸಾಯಿ ಪಕ್ಷದೊಳಗೆ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಈ ಪೈಕಿ ಛತ್ತೀಸ್‌ಗಡ ಬಿಜೆಪಿ ಅಧ್ಯಕ್ಷತೆಯೂ ಸೇರಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಅವರು ಕೇಂದ್ರ ಸಚಿವರಾಗಿದ್ದರು.

ಆದಿವಾಸಿ ಪ್ರಾಬಲ್ಯವಿರುವ ಪ್ರಾಂತ್ಯಗಳಲ್ಲಿ ಬಿಜೆಪಿಯು ದೊಡ್ಡ ಯಶಸ್ಸು ಗಳಿಸಿರುವ ಹಿನ್ನೆಲೆಯಲ್ಲಿ ವಿಷ್ಣು ದಿಯೋ ಸಾಯಿ ಅವರನ್ನು ಛತ್ತೀಸ್‌ಗಡದ ನೂತನ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ 29 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಮರಳುವಂತಾಗಿದೆ. ಇದರಿಂದಾಗಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರವು ಪತನವಾಗಿದೆ.

ಫೆಬ್ರವರಿ 21, 1064ರಲ್ಲಿ ಛತ್ತೀಸ್‌ಗಡದ ಜಶ್ಪುರ್ ಜಿಲ್ಲೆಯ ಬಾಗಿಯಾ ಗ್ರಾಮದಲ್ಲಿ ವಿಷ್ಣು ದಿಯೋ ಸಾಯಿ ಜನಿಸಿದರು. ಜಶ್ಪುರ್ ನ ಕುನ್ಕುರಿಯ ಲೊಯೊಲಾ ಪ್ರೌಢ ಶಿಕ್ಷಣ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಿದ್ದ ಅವರು, ರಾಜಕೀಯಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ರೈತರಾಗಿದ್ದರು.

2000ನೇ ಇಸವಿಯಲ್ಲಿ ಛತ್ತೀಸ್‌ಗಡ ರಾಜ್ಯ ರಚನೆಯಾದಾಗಿನಿಂದ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿರುವ ಎರಡನೆ ವ್ಯಕ್ತಿ 59 ವರ್ಷದ ವಿಷ್ಣು ದಿಯೋ ಸಾಯಿ ಆಗಿದ್ದಾರೆ. ಬಾಗಿಯಾದಲ್ಲಿ ಸರಪಂಚರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದ ಅವರು, ಮಧ್ಯಪ್ರದೇಶದಿಂದ ಛತ್ತೀಸ್‌ಗಡ ರಾಜ್ಯವನ್ನು ಪ್ರತ್ಯೇಕಿಸುವುದಕ್ಕೂ ಮುನ್ನ ಮಧ್ಯಪ್ರದೇಶ ವಿಧಾನಸಭೆಯ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಇದರ ಬೆನ್ನಿಗೇ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ ವಿಷ್ಣು ದಿಯೋ ಸಾಯಿ, 1999-2014ರವರೆಗೆ ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಛತ್ತೀಸ್‌ಗಡದ ರಾಯಗಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಯಾವುದೇ ಹಾಲಿ ಸಂಸದರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂಬ ಪಕ್ಷದ ತೀರ್ಮಾನದಂತೆ ಅವರು ಆ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ.

2006ರಿಂದ 2010ರವರೆಗೆ ಮೂರು ಬಾರಿ ಬಿಜೆಪಿ ಅಧ್ಯಕ್ಷರಾಗಿದ್ದ ವಿಷ್ಣು ದಿಯೋ ಸಾಯಿ, 2014ರಲ್ಲಿ ಕೆಲ ಕಾಲ ಹಾಗೂ ಮತ್ತೆ 2020-2022ರವರೆಗೆ ಬಿಜೆಪಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಅವಧಿಯಲ್ಲಿ ವಿಷ್ಣು ದಿಯೋ ಸಾಯಿ ಕೇಂದ್ರ ಉಕ್ಕು, ಗಣಿಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ 2014-2019ರವರೆಗೆ ಕಾರ್ಯನಿರ್ವಹಿಸಿದ್ದರು.

ಕುನ್ಕುರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಷ್ಣು ದಿಯೋ ಸಾಯಿ, 87,604 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ನ ಯು.ಡಿ.ಮಿಂಜಿಯನ್ನು 25,541 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

1991ರಲ್ಲಿ ವಿವಾಹವಾದ ವಿಷ್ಣು ದಿಯೋ ಸಾಯಿ ಹಾಗೂ ಕೌಶಲ್ಯ ದೇವಿ ದಂಪತಿಗಳಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಮೂಲತಃ ಛತ್ತೀಸ್‌ಗಡದಲ್ಲಿ ನೆಲೆಸಿರುವ ಕನ್ವರ್ ಬುಡಕಟ್ಟು ಸಮುದಾಯಕ್ಕೆ ವಿಷ್ಣು ದಿಯೋ ಸಾಯಿ ಸೇರಿದ್ದಾರೆ. ಛತ್ತೀಸ್‌ಗಡ ರಾಜ್ಯದಲ್ಲಿ ಕನ್ವರ್ ಬುಡಕಟ್ಟು ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು ಸ್ಥಾನಮಾನವಿದೆ.

ಛತ್ತೀಸ್‌ಗಡ ಮುಖ್ಯಮಂತ್ರಿಯಾಗಿ ನಿಯೋಜಿತರಾಗಿರುವ ವಿಷ್ಣು ದಿಯೋ ಸಾಯಿ ರಾಜಕೀಯದ ಬಿಡುವಿನ ಸಮಯದಲ್ಲಿ ಬ್ಯಾಡ್ಮಿಂಟನ್, ಫುಟ್ ಬಾಲ್ ಹಾಗೂ ಪುಸ್ತಕಗಳ ಓದಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅವರು ಸಾಮಾಜಿಕ ಸೇವೆಗಳಲ್ಲೂ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News