×
Ad

ಒಡಿಶಾ | ಬೆಂಕಿ ಹಚ್ಚಿಕೊಂಡು ವಕೀಲ ಸಜೀವ ದಹನ

Update: 2025-08-29 18:00 IST

ಸಾಂದರ್ಭಿಕ ಚಿತ್ರ

ಭುವನೇಶ್ವರ: 46 ವರ್ಷದ ವಕೀಲರೊಬ್ಬರು ತಮ್ಮ ನಿವಾಸದಲ್ಲಿ ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿರುವ ಘಟನೆ ಗುರುವಾರ ರಾತ್ರಿ ಮಂಚೇಶ್ವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತ ವಕೀಲರು ಮನೆಯ ಛಾವಣಿಯ ಮೇಲೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಯಾವುದೇ ಲಿಖಿತ ಹೇಳಿಕೆ ಪತ್ತೆಯಾಗಿಲ್ಲ.

ಪ್ರಾಥಮಿಕ ತನಿಖೆಗಳ ಪ್ರಕಾರ, ಅವರು ತಮ್ಮ ಮನೆಯ ಛಾವಣಿ ಮೇಲಿನ ಕೊಠಡಿಯಲ್ಲಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದ ಕುರಿತು ತನಿಖೆ ನಡೆಸಲು ವಿಧಿವಿಜ್ಞಾನ ತಂಡವೊಂದು ಮೃತ ವಕೀಲರ ನಿವಾಸಕ್ಕೆ ಭೇಟಿ ನೀಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ದೃಢಪಡಿಸಿರುವ ಭುವನೇಶ್ವರ ಉಪ ಪೊಲೀಸ್ ಆಯುಕ್ತ ಜಗಮೋಹನ್ ಮೀನಾ, ಪ್ರಕರಣದ ಕುರಿತು ವಿಸ್ತೃತ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

“ಪ್ರಾಥಮಿಕ ತನಿಖೆಯ ಪ್ರಕಾರ, ಈ ಘಟನೆಯ ಹಿಂದೆ ಯಾವುದೇ ಪಿತೂರಿ ಕಂಡು ಬಂದಿಲ್ಲ. ಹಾಗೆಯೇ, ಆತ್ಮಹತ್ಯೆಗೆ ಪ್ರಚೋದನೆಯಂತಹ ಕೃತ್ಯವೂ ಕಂಡು ಬಂದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಘಟನೆಯ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಹಾಗೂ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ, ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದೂ ಅವರು ತಿಳಿಸಿದ್ದಾರೆ.

ಮೃತ ವಕೀಲರು ತಮ್ಮ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News