ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆ: ಜನ್ ಸುರಾಜ್ ಪಕ್ಷದ ಎಲ್ಲ ಸಂಘಟನಾತ್ಮಕ ಘಟಕಗಳನ್ನು ವಿಸರ್ಜಿಸಿದ ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ | Photo Credit : PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬೆನ್ನಿಗೇ, ಶನಿವಾರ ಪಂಚಾಯತಿ ಹಂತದಿಂದ ರಾಜ್ಯ ಮಟ್ಟದವರೆಗಿನ ಜನ್ ಸುರಾಜ್ ಪಕ್ಷದ ಸಂಘಟನಾತ್ಮಕ ಘಟಕಗಳನ್ನು ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ವಿಸರ್ಜಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಜನ್ ಸುರಾಜ್ ಪಕ್ಷದ ವಕ್ತಾರ ಸೈಯದ್ ಮಾಸಿಹ್ ಉದ್ದೀನ್, ಮುಂದಿನ ಒಂದೂವರೆ ತಿಂಗಳಲ್ಲಿ ನೂತನ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷ ಮನೋಜ್ ಭಾರತಿ ನೇತೃತ್ವದಲ್ಲಿ ಪಾಟ್ನಾದಲ್ಲಿ ಆಯೋಜನೆಗೊಂಡಿದ್ದ ಜನ್ ಸುರಾಜ್ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ಭಾರತೀಯ ಸೇನೆಯ ಮಾಜಿ ಉಪ ಮುಖ್ಯಸ್ಥ ಎಸ್.ಕೆ.ಸಿಂಗ್, ಮಾಜಿ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಹಾಗೂ ಹಿರಿಯ ವಕೀಲ ವೈ.ವಿ.ಗಿರಿಯೊಂದಿಗೆ ಪ್ರಶಾಂತ್ ಕಿಶೋರ್ ಕೂಡಾ ಉಪಸ್ಥಿತರಿದ್ದರು.
ಬಳಿಕ ಬಿಡುಗಡೆ ಮಾಡಲಾಗಿರುವ ಪತ್ರಿಕಾ ಪ್ರಕಟನೆಯಲ್ಲಿ, “ರಾಜ್ಯದ ಎಲ್ಲ 12 ವಿಭಾಗಗಳ ಹೊಣೆಗಾರಿಕೆಯನ್ನು ಹಿರಿಯ ನಾಯಕರಿಗೆ ವಹಿಸಲಾಗಿದ್ದು, ಪರಿಣಾಮಕಾರಿ ಮತ್ತು ಸಕ್ರಿಯ ಸಂಘಟನಾತ್ಮಕ ಚೌಕಟ್ಟನ್ನು ಮರು ರಚಿಸಲಾಗುವುದು. ಪಕ್ಷದ ಈ ತಂಡವು ಚುನಾವಣೆಯಲ್ಲಿ ಆಗಿರುವ ಪರಾಭವದ ಕಾರಣಗಳನ್ನು ಪತ್ತೆ ಹಚ್ಚಲು ವಿಸ್ತೃತ ಚರ್ಚೆಗಳನ್ನು ನಡೆಸುವುದು ಹಾಗೂ ಅಶಿಸ್ತು ಅಥವಾ ಆಂತರಿಕ ದ್ರೋಹದ ದೋಷಿಗಳಾಗಿರುವ ನಾಯಕರಿಗೆ ಸಂಬಂಧಿಸಿದಂತೆ ವರದಿಯೊಂದನ್ನು ಸಲ್ಲಿಸಲಾಗುವುದು” ಎಂದು ಹೇಳಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಹುತೇಕ ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಳ್ಳುವ ಮೂಲಕ, ರಾಜ್ಯದಲ್ಲಿ ಖಾತೆ ತೆರೆಯುವಲ್ಲಿ ಜನ್ ಸುರಾಜ್ ಪಕ್ಷ ವಿಫಲಗೊಂಡಿತ್ತು.