×
Ad

ಎಐ171 ವಿಮಾನ ಅಪಾಘತ | ಏರ್‌ಬಸ್ ವಿಮಾನಗಳಲ್ಲಿ ಸುರಕ್ಷಾ ಶಿಷ್ಟಾಚಾರಗಳ ಉಲ್ಲಂಘನೆ ಕುರಿತು ಡಿಜಿಸಿಎ ಏರ್ ಇಂಡಿಯಾಕ್ಕೆ ಎಚ್ಚರಿಸಿತ್ತು: ವರದಿ

Update: 2025-06-20 20:44 IST

PC : PTI 

ಹೊಸದಿಲ್ಲಿ: ತುರ್ತು ವ್ಯವಸ್ಥೆಗಳ ಭದ್ರತಾ ಪರಿಶೀಲನೆ ಬಾಕಿ ಇದ್ದ ಹೊರತಾಗಿಯೂ ಏರ್ ಇಂಡಿಯಾ ತನ್ನ ಏರ್ ಬಸ್ ಕಂಪೆನಿಯ ಮೂರು ವಿಮಾನಗಳ ಕಾರ್ಯಾಚರಣೆ ಮುಂದುವರಿಸಿದ ಬಳಿಕ, ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸುರಕ್ಷತಾ ಶಿಷ್ಟಾಚಾರಗಳ ಉಲ್ಲಂಘನೆಗಳ ಕುರಿತು ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಎಂದು ಸರಕಾರದ ದಾಖಲೆಗಳನ್ನು ಉಲ್ಲೇಖಿಸಿ ರಾಯ್ಟರ್ಸ್‌ ವರದಿ ಮಾಡಿದೆ.

ಏರ್ ಇಂಡಿಯಾದ ಎಐ 171 ವಿಮಾನ-ಬೋಯಿಂಗ್ 787-8 ಡ್ರೀಮ್‌ಲೈನರ್ ಅಹ್ಮದಾಬಾದ್‌ ನ ಸರ್ದಾರ್ ವಲ್ಲಭಾ ಬಾ ಪಟೇಲ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ಸಂದರ್ಭ ಸಂಭವಿಸಿದ ದುರಂತದಲ್ಲಿ ಓರ್ವರನ್ನು ಹೊರತುಪಡಿಸಿ ಉಳಿದ 242 ಪ್ರಯಾಣಿಕರು ಮೃತಪಟ್ಟಿದ್ದರು. ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದರು. ಈ ದುರಂತದ ಬಳಿಕ ಏರ್ ಇಂಡಿಯಾ ತೀವ್ರ ಟೀಕೆಗೆ ಗುರಿಯಾಗಿದೆ.

ಕಳೆದ ತಿಂಗಳು ದಿಡೀರ್ ಪರಿಶೀಲನೆ ವೇಳೆ ಏರ್ ಇಂಡಿಯಾದ ಏರ್ ಬಸ್ ಕಂಪೆನಿಯ ಮೂರು ವಿಮಾನಗಳ ತುರ್ತು ನಿರ್ಗಮನ ದ್ವಾರಗಳ ಕಡ್ಡಾಯ ತಪಾಸಣೆಗಳನ್ನು ಈ ಹಿಂದೆಯೇ ಮಾಡಬೇಕಿತ್ತು. ಆದರೂ ಏರ್ ಇಂಡಿಯಾ ಈ ವಿಮಾನಗಳನ್ನು ಬಳಸುತ್ತಿದೆ ಎಂಬುದು ಪತ್ತೆಯಾಗಿತ್ತು ಎಂದು ರಾಯ್ಟರ್ ಉಲ್ಲೇಖಿಸಿದ ಡಿಜಿಸಿಎ ವರದಿ ಹೇಳಿದೆ.

ಒಂದು ಪ್ರಕರಣದಲ್ಲಿ, ತಪಾಸಣೆ ನಡೆಸುವಲ್ಲಿ ಒಂದು ತಿಂಗಳಿಗಿಂತ ಹೆಚ್ಚು ವಿಳಂಬದ ಹೊರತಾಗಿಯೂ ಏರ್ ಬಸ್ ಎ320 ಜೆಟ್ ದುಬೈ, ರಿಯಾದ್ ಹಾಗೂ ಜೆದ್ದಾದಂತಹ ಅಂತರ ರಾಷ್ಟ್ರೀಯ ಸ್ಥಳಗಳಿಗೆ ಹಾರಾಟ ನಡೆಸಿರುವುದು ಪತ್ತೆಯಾಗಿತ್ತು.

ಇನ್ನೊಂದು ಪ್ರಕರಣದಲ್ಲಿ, ದೇಶೀಯ ಮಾರ್ಗಗಳಲ್ಲಿ ಬಳಸಲಾದ ಏರ್‌ಬಸ್ ಎ319 ತಪಾಸಣೆಗೆ 3 ತಿಂಗಳಿಗೂ ಅಧಿಕ ಕಾಲ ವಿಳಂಬವಾಗಿರುವುದು ಕಂಡು ಬಂದರೆ, ಮೂರನೇಯ ಪ್ರಕರಣದಲ್ಲಿ ತಪಾಸಣೆಗೆ 2 ದಿನ ವಿಳಂಬವಾಗಿರುವುದು ಕಂಡು ಬಂದಿದೆ.

ಈ ಮೇಲಿನ ಪ್ರಕರಣಗಳು ಅವಧಿ ಮುಗಿದ ಅಥವಾ ಪರಿಶೀಲಿಸದ ತುರ್ತು ನಿರ್ಗಮನ ದ್ವಾರಗಳೊಂದಿಗೆ ವಿಮಾನಗಳು ಕಾರ್ಯ ನಿರ್ವಹಿಸಿರುವುದನ್ನು ಸೂಚಿಸಿದೆ. ಆ ಮೂಲಕ ಪ್ರಮಾಣಿತ ಹಾರಾಟದ ಕ್ಷಮತೆ ಹಾಗೂ ಸುರಕ್ಷಾ ಅಗತ್ಯತೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎ ವರದಿಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News