ಏರ್ ಇಂಡಿಯಾದ ಆರ್‌ಎಟಿ ಘಟನೆ |ಎಲ್ಲಾ ಬೋಯಿಂಗ್ 787 ವಿಮಾನಗಳ ಇಲೆಕ್ಟ್ರಿಕಲ್ ವ್ಯವಸ್ಥೆಯ ತನಿಖೆಗೆ ಡಿಜಿಸಿಎಗೆ ಎಫ್‌ಐಪಿ ಸೂಚನೆ
ಸಾಂದರ್ಭಿಕ ಚಿತ್ರ | PTI
ಮುಂಬೈ, ಅ. 5: ದೇಶದ ಎಲ್ಲಾ ಬೋಯಿಂಗ್ 787 ವಿಮಾನಗಳ ಇಲೆಕ್ಟ್ರಿಕ್ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಹಾಗೂ ತನಿಖೆ ನಡೆಸುವಂತೆ ಫೆಡರೇಷನ್ ಆಫ್ ಇಂಡಿಯನ್ ಪೈಲಟ್ಸ್ (ಎಫ್‌ಐಪಿ) ರವಿವಾರ ನಾಗರಿಕ ವಾಯು ಯಾನದ ಮಹಾ ನಿರ್ದೇಶನಾಲಯ (ಡಿಜಿಸಿಎ)ವನ್ನು ಆಗ್ರಹಿಸಿದೆ.
ಏರ್ ಇಂಡಿಯಾ ನಿರ್ವಹಿಸುತ್ತಿದ್ದ ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ಸಂಚರಿಸುವ ಬೋಯಿಂಗ್ 787 ವಿಮಾನ ಬ್ರಿಟನ್‌ನ ನಗರದಲ್ಲಿ ಇಳಿಯಲು ಅಣಿಯಾಗುತ್ತಿರುವಂತೆ ರಾಮ್ ಏರ್ ಟರ್ಬೈನ್ (ಆರ್‌ಎಟಿ, ತುರ್ತು ವಿದ್ಯುತ್ ಉತ್ಪಾದಿಸುವ ಟರ್ಬೈನ್) ಸಕ್ರಿಯಗೊಂಡ ಘಟನೆಯ ಒಂದು ದಿನದ ಬಳಿಕ ಫೆಡರೇಷನ್ ಆಫ್ ಇಂಡಿಯನ್ ಪೈಲಟ್ಸ್ (ಎಫ್‌ಐಪಿ)ನಾಗರಿಕ ವಾಯು ಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ಪತ್ರ ಬರೆದಿದೆ.
ಅಕ್ಟೋಬರ್ 4ರಂದು ಇಳಿಯಲು ಸಿದ್ಧವಾಗುತ್ತಿದ್ದಂತೆ ಬೋಯಿಂಗ್ 787 ವಿಮಾನದ ರಾಮ್ ಏರ್ ಟರ್ಬೈನ್ (ಆರ್‌ಎಟಿ) ಇದ್ದಕ್ಕಿದ್ದಂತೆ ಕಾರ್ಯ ನಿರ್ವಹಿಸಲು ಆರಂಭಿಸಿತು. ಆದರೆ, ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ಅಮೃತಸರ-ಬರ್ಮಿಂಗ್‌ಹ್ಯಾಮ್ ವಿಮಾನದ ಸಿಬ್ಬಂದಿ ವರದಿ ಮಾಡಿರುವುದಾಗಿ ಏರ್ ಇಂಡಿಯಾ ತಿಳಿಸಿದೆ.
ವಿಮಾನದ ಎರಡೂ ಎಂಜಿನ್‌ಗಳು ವಿಫಲವಾದ ಅಥವಾ ಒಟ್ಟು ಇಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವಿಫಲವಾದ ಸಂದರ್ಭ ಆರ್‌ಎಟಿ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.