ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನದ ವಿಡಿಯೋ ವೈರಲ್
Screengrab:X
ಅಹಮದಾಬಾದ್: ಇಂದು (ಗುರುವಾರ) ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತದ 17 ಸೆಕೆಂಡ್‌ಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಲಂಡನ್‌ನ ಗಾಟ್ವಿಕ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ ಎಐ171ನಲ್ಲಿ ಟೇಕಾಫ್ ಆಗುತ್ತಿದ್ದಂತೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ಕೆಲವೇ ನಿಮಿಷಗಳಲ್ಲಿ ವಸತಿ ಪ್ರದೇಶವೊಂದರ ಮೇಲೆ ವಿಮಾನ ಪತನವಾಗಿದೆ. ಈ ವಿಮಾನದಲ್ಲಿ 242 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ, "ಅಹಮದಾಬಾದ್‌ನಿಂದ ಲಂಡನ್‌ನ ಗಾಟ್ವಿಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ಸಂಖ್ಯೆ ಎಐ171 ಇಂದು ಅಪಘಾತಕ್ಕೀಡಾಗಿದೆ. ಈ ಕ್ಷಣ ನಾವು ವಿವರಗಳನ್ನು ಪರಿಶೀಲಿಸುತ್ತಿದ್ದು, ಮತ್ತಷ್ಟು ಮಾಹಿತಿಗಳನ್ನು ನಾವು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇವೆ" ಎಂದು ಪ್ರಕಟಿಸಿದೆ.
ವಿಮಾನ ನಿಲ್ದಾಣದಿಂದ ಆಕಾಶದೆತ್ತರ ದಟ್ಟ ಹೊಗೆ ಆವರಿಸಿರುವುದು ವಿಡಿಯೊ ದೃಶ್ಯಗಳಲ್ಲಿ ಕಂಡು ಬಂದಿದೆ.