ಹಿಟ್ಲರ್ ವಿರುದ್ಧ ನಿಲ್ಲುವ ಧೈರ್ಯವಿತ್ತು ಎಂದು ಅಜ್ಜನನ್ನು ನೆನಪಿಸಿಕೊಂಡು ಫೆಲೆಸ್ತೀನ್ ಪರ ಪೋಸ್ಟ್ ಮಾಡಿದ ನಟಿ ಸೋನಿ ರಝ್ದಾನ್
Photo | freepressjournal
ಮುಂಬೈ: ಫೆಲೆಸ್ತೀನ್ ನಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿರುವ ಮಧ್ಯೆ ಆಲಿಯಾ ಭಟ್ ಅವರ ತಾಯಿ, ಹಿರಿಯ ನಟಿ ಸೋನಿ ರಝ್ದಾನ್ ಫೆಲೆಸ್ತೀನ್ ಪರ ಧ್ವನಿ ಎತ್ತಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ನನ್ನ ಅಜ್ಜ ಈ ಭಯಾನಕ ಮತ್ತು ಅನಿಶ್ಚಿತ ವಾತಾವರಣದಲ್ಲಿ ಹಿಟ್ಲರ್ ವಿರುದ್ಧ ಭೂಗತ ಪತ್ರಿಕೆಯನ್ನು ನಡೆಸುವ ಧೈರ್ಯ ತೋರಿದ್ದರು. ಅವರು ಪತ್ರಿಕೆಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸಿದ್ದರು. ಆದರೆ ಅನಿವಾರ್ಯವಾದದ್ದು ಸಂಭವಿಸಿತು. ಒಂದು ದಿನ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಯಿತು. ಅವರನ್ನು ಜೈಲಿಗೆ ಹಾಕಲಾಯಿತು. ನಂತರ ಬಂಧನ ಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ಅವರು ಸಾಕಷ್ಟು ನೋವುಗಳನ್ನು ಅನುಭವಿಸಿದರು ಎಂದು ಹೇಳಿದ್ದಾರೆ.
ಆದರೆ, ಅವರು ಜರ್ಮನ್ ನವರಾಗಿದ್ದರು, ಯಹೂದಿ ಅಲ್ಲ. ನನ್ನ ಅಜ್ಜಿ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಒಳ್ಳೆಯ ವಕೀಲರು ಸಿಕ್ಕಿದರು. ಅಂತಿಮವಾಗಿ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಹೇಳಿದ್ದಾರೆ.
ನನ್ನ ಅಜ್ಜನಿಗೆ ಹಲವು ವರ್ಷಗಳ ಹಿಂದೆಯೇ ಓರ್ವ ನಿರಂಕುಶಾಧಿಕಾರಿಯ ವಿರುದ್ಧ ನಿಲ್ಲುವ ಧೈರ್ಯವಿತ್ತು. ಅವರು ಜೀವಂತವಾಗಿರುತ್ತಿದ್ದರೆ ಇಂದಿನ ಫೆಲೆಸ್ತೀನ್ ಪರಿಸ್ಥಿತಿ ನೋಡಿ ಅವರು ಮರುಗುತ್ತಿದ್ದರು. ಯಾಕೆಂದರೆ, ಅವರು ಯಾರಿಗಾಗಿ ಹೋರಾಡಿದ್ದಾರೋ, ಈಗ ಅದೇ ಜನರು ಅವರನ್ನು ದಬ್ಬಾಳಿಕೆ ಮಾಡುವವರಾಗಿ ಬದಲಾಗಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಅಜ್ಜ ಜರ್ಮನ್ ನವರು. ಹಿಟ್ಲರ್ ವೇಗವಾಗಿ ಶಕ್ತಿಶಾಲಿಯಾಗುತ್ತಿದ್ದ ಮತ್ತು ಯಹೂದಿ ಬಂಧನ ಕೇಂದ್ರಗಳು ದಟ್ಟವಾಗಿ ಬೆಳೆಯುತ್ತಿದ್ದ ಸಮಯದಲ್ಲಿ ಅವರು ಜರ್ಮನಿಯಲ್ಲಿ ವಾಸಿಸುತ್ತಿದ್ದರು. ಜರ್ಮನಿಯಾದ್ಯಂತ ಯಹೂದಿಗಳ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಅವರನ್ನು ಹಿಟ್ಲರ್ ಕಪ್ಪುಪಟ್ಟಿಗೆ ಸೇರಿಸಿದ್ದ. ಅವರ ಅಂಗಡಿಗಳನ್ನು ಧ್ವಂಸ ಮಾಡಿಸಿದ್ದ. ಅವರ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದ್ದ ಎಂದು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಹಿಟ್ಲರ್ ವಿರುದ್ಧ ಇದ್ದ ಅನೇಕ ಜರ್ಮನೀಯರಂತೆ, ಇಂದು ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವ ಘಟನೆಗಳನ್ನು ವಿರೋಧಿಸುವ ಹಲವಾರು ಯಹೂದಿಗಳು ಇದ್ದಾರೆ. ಆದರೆ, ನನ್ನ ಅಜ್ಜನಂತೆ ಸರಿಯಾದದ್ದನ್ನು ಬೆಂಬಲಿಸಬೇಕೆಂಬ ಧೈರ್ಯ ಬಹಳ ಕಡಿಮೆ ಜನರಿಗೆ ಮಾತ್ರ ಇತ್ತು ಎಂದು ಹೇಳಿದರು.
ನನಗೆ ಅವರ ಧೈರ್ಯದ ಅರ್ಧದಷ್ಟೂ ಇಲ್ಲ. ಆದರೆ, ಅವರ ಪರಂಪರೆಯ ಗೌರವಾರ್ಥವಾಗಿ, ನಾನು ಇಂದು ಮಾತನಾಡುತ್ತೇನೆ. ನಾನು ಮಾತನಾಡಬೇಕು. ಏಕೆಂದರೆ, ದೌರ್ಜನ್ಯಗಳು ನಡೆಯುತ್ತಿರುವಾಗ ಮೌನವಾಗಿರುವುದು ಅಪರಾಧ ಎಂದು ರಝ್ದಾನ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ರಝ್ದಾನ್ ಮಗಳು ನಟಿ ಆಲಿಯಾ ಭಟ್, ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ತನ್ನ ತಾಯಿ ಮತ್ತು ಅವರ ಹೆಮ್ಮೆಯ ಪರಂಪರೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ̤