ದಿಲ್ಲಿಯ ಕೆಂಪು ಕೋಟೆ ಬಳಿ ಸ್ಫೋಟ ಘಟನೆ ಖಂಡಿಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ; ನಿಷ್ಪಕ್ಷ ತನಿಖೆಗೆ ಆಗ್ರಹ
ಹೊಸದಿಲ್ಲಿ: ದಿಲ್ಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೂ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಅಖಿಲ ಭಾರತೀಯ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ಐತಿಹಾಸಿಕ ಕೆಂಪು ಕೋಟೆಯ ತೀರಾ ಸನಿಹದಲ್ಲೇ ಸಂಭವಿಸಿರುವ ಈ ಸ್ಫೋಟದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸ್ಫೋಟದ ಕುರಿತು ಸಮಗ್ರ, ನಿಷ್ಪಕ್ಷ ಹಾಗೂ ಬಹು ಆಯಾಮದ ತನಿಖೆಯನ್ನು ನಡೆಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ಈ ಘಟನೆಯೇನಾದರೂ ಆಕಸ್ಮಿಕವಾಗಿದ್ದರೆ, ಈ ಘಟನೆಯಲ್ಲಿ ಜೀವಹಾನಿ ಹಾಗೂ ಗಾಯಗಳಾಗಿರುವುದು ತೀರ ದುರದೃಷ್ಟಕರವಾಗಿದೆ. ಆದರೆ, ಒಂದು ವೇಳೆ ಇದೇನಾದರೂ ಭಯೋತ್ಪಾದನೆಯ ಕೃತ್ಯವಾಗಿದ್ದರೆ, ನಿಜಕ್ಕೂ ತೀವ್ರ ಆತಂಕಕಾರಿಯಾಗಿದೆ. ವಿಶೇಷವಾಗಿ, ರಾಷ್ಟ್ರ ರಾಜಧಾನಿಯಲ್ಲಿನ ಸೂಕ್ಷ್ಮ ಪ್ರದೇಶಗಳೂ ಸುರಕ್ಷಿತವಾಗಿಲ್ಲವೆಂದಾದರೆ, ಇದು ದೇಶದ ಭದ್ರತಾ ವ್ಯವಸ್ಥೆಯ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆದಗಳನ್ನೆತ್ತುತ್ತದೆ ಎಂದು ಮೌಲಾನಾ ರಹ್ಮಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ದುಃಖ ಮತ್ತು ವಿಷಾದದ ಗಳಿಗೆಯಲ್ಲಿ ಸಂತ್ರಸ್ತ ಕುಟುಂಬಗಳೊಟ್ಟಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಲ್ಲಲಿದೆ ಹಾಗೂ ಈ ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.