×
Ad

ಪ್ರಧಾನಿಯ ಹೆಸರನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳಲಾಗಿದೆ: ನೇಹಾ ಸಿಂಗ್ ರಾಥೋಡ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಕಾರ

Update: 2025-09-21 13:33 IST

ನೇಹಾ ಸಿಂಗ್ ರಾಥೋಡ್ (Photo: instagram) 

ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ, ಬಿಹಾರ ಚುನಾವಣೆ ಹಾಗೂ ಹಿಂದೂ ಮುಸ್ಲಿಂ ರಾಜಕೀಯದ ಕುರಿತಂತೆ ತಾವು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕು ಎಂಬ ಭೋಜಪುರಿ ಗಾಯಕಿ ಹಾಗೂ ಹೋರಾಟಗಾರ್ತಿ ನೇಹಾ ಸಿಂಗ್ ರಾಥೋಡ್ ಅವರ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ ರಾಜೇಶ್ ಸಿಂಗ್ ಚೌಹಾಣ್ ಹಾಗೂ ನ್ಯಾ. ಸೈಯದ್ ಕಮರ್ ಹಸನ್ ರಿಝ್ವಿ ಅವರನ್ನೊಳಗೊಂಡ ನ್ಯಾಯಪೀಠ, ಸೆಪ್ಟೆಂಬರ್ 26ರಂದು ತನಿಖಾಧಿಕಾರಿಯೆದರು ಹಾಜರಾಗಿ, ಪೊಲೀಸರು ವರದಿ ಸಲ್ಲಿಸುವವರೆಗೂ ತನಿಖೆಗೆ ಸಹಕರಿಸುವಂತೆ ನೇಹಾ ಸಿಂಗ್ ರಾಥೋಡ್ ಅವರಿಗೆ ಆದೇಶಿಸಿದೆ.

ನೇಹಾ ಸಿಂಗ್ ರಾಥೋಡ್ ವಿರುದ್ಧ ಕೇಳಿ ಬಂದಿರುವ ಆರೋಪಗಳು ಮೇಲ್ನೋಟಕ್ಕೆ ಗಂಭೀರ ಸ್ವರೂಪದ್ದಾಗಿದ್ದು, ಪೊಲೀಸ್ ಅಧಿಕಾರಿಗಳ ತನಿಖೆಯನ್ನು ಸಮರ್ಥಿಸುತ್ತಿದೆ. ಪಹಲ್ಗಾಮ್ ದಾಳಿಯ ಬೆನ್ನಿಗೇ ನೇಹಾ ಸಿಂಗ್ ರಾಥೋಡ್ ಅವರು ಟ್ವೀಟ್ ಮಾಡಿರುವ ಸಮಯ ಮಹತ್ವದ್ದು ಹಾಗೂ ಪರಿಗಣನೀಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಪಹಲ್ಗಾಮ್ ದಾಳಿಯ ನಂತರ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯತೆ ಹೆಸರಿನಲ್ಲಿ ಮತ ಗಳಿಸಲು ಮುಂದಾಗಿದ್ದಾರೆ ಎಂದು ನೇಹಾ ಸಿಂಗ್ ರಾಥೋಡ್ ಮಾಡಿದ್ದ ಎಕ್ಸ್ ಪೋಸ್ಟ್ ಗಳ ವಿರುದ್ಧ ಹಝ್ರತ್ ಗಂಜ್ ಪೊಲೀಸರು ಎಪ್ರಿಲ್ ತಿಂಗಳಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ನೇಹಾ ಸಿಂಗ್ ರಾಥೋಡ್ ತಮ್ಮ ಪೋಸ್ಟ್ ಗಳಲ್ಲಿ ಬಿಜೆಪಿಯು ತನ್ನ ತಪ್ಪನ್ನು ಒಪ್ಪಿಕೊಂಡು, ಭಯೋತ್ಪಾದಕರನ್ನು ಪತ್ತೆ ಹಚ್ಚುವ ಬದಲು ದೇಶವನ್ನು ಯುದ್ಧಕ್ಕೆ ನೂಕುತ್ತಿದೆ ಎಂದೂ ಆರೋಪಿಸಿದ್ದರು.

ನೇಹಾ ಸಿಂಗ್ ರಾಥೋಡ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ ಅವರ ವಕೀಲರು, ಭಾರತೀಯ ಸಂವಿಧಾನದ ವಿಧಿ 19(1)(ಎ) ಅಡಿ ಆಕೆಗೆ ತನ್ನ ದೃಷ್ಟಿಕೋನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವ ಮೂಲಭೂತ ಹಕ್ಕಿದೆ ಹಾಗೂ ಇಂತಹ ಮೂಲಭೂತ ಹಕ್ಕುಗಳನ್ನು ಯಾವ ಪ್ರಭುತ್ವವೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಆದರೆ, ಈ ವಾದಗಳನ್ನು ತಳ್ಳಿ ಹಾಕಿದ ನ್ಯಾಯಾಲಯ, ಪ್ರಧಾನಿಗಳ ಹೆಸರನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಅವಹೇಳನಕಾರಿಯಾಗಿ ಬಳಸಲಾಗಿದೆ ಎಂದು ಅಭಿಪ್ರಾಯ ಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News