ಬಲವಂತವಾಗಿ ದೇಗುಲದ ಗರ್ಭಗುಡಿ ಪ್ರವೇಶ ಆರೋಪ: ಬಿಜೆಪಿಯ ಇಬ್ಬರು ಸಂಸದರ ವಿರುದ್ಧ ಪ್ರಕರಣ
PC: x.com/ndtv
ರಾಂಚಿ: ದೇವಗಢದ ಬಾಬಾ ಬೈದನಾಥ್ ದೇವಾಲಯದ ಗರ್ಭಗುಡಿಗೆ ಆಗಸ್ಟ್ 2ರಂದು ಬಲವಂತವಾಗಿ ಪ್ರವೇಶಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಅರೋಪದಲ್ಲಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ಮನೋಜ್ ತಿವಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ.
ದೇವಾಲಯದ ಅರ್ಚಕ ಕಾರ್ತಿಕ್ ನಾಥ್ ಠಾಕೂರ್ ಅವರು ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಶ್ರಾವಣ ಮಾಸದಲ್ಲಿ ದೊಡ್ಡಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಿಐಪಿ ಮತ್ತು ವಿವಿಐಪಿಗಳ ಪ್ರವೇಶಕ್ಕೆ ನಿರ್ಬಂಧ ಇರುವ ಹೊರತಾಗಿಯೂ, ಆಗಸ್ಟ್ 2ರಂದು ರಾತ್ರಿ 8.45 ರಿಂದ 9 ಗಂಟೆಯ ನಡುವೆ ಬಲವಂತವಾಗಿ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿದ್ದಾಗಿ ಆಪಾದಿಸಲಾಗಿದೆ.
ನಿಶಿಕಾಂತ್ ದುಬೆ, ಮನೋಜ್ ತಿವಾರಿ, ಕಾಂಶಿಕಾಂತ್ ದುಬೆ, ಶೇಷಾದ್ರಿ ದುಬೆ ಮತ್ತು ಇತರರ ವಿರುದ್ಧ ದೇವಾಲಯ ಗರ್ಭಗುಡಿ ಪ್ರವೇಶಿಸಿದ ಸಂಬಂಧ ಬಾಬಾ ಬೈದ್ಯನಾಥ್ ಮಂದಿರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಮತ್ತು ಸಂಪ್ರದಾಯಗಳಿಗೆ ಧಕ್ಕೆ ತಂದಿದ್ದು, ದೇಗುಲದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿಯ ಜತೆ ಜಗಳವಾಡಿ ತಡೆ ಒಡ್ಡಿದ್ದಾಗಿಯೂ ಆಪಾದಿಸಲಾಗಿದೆ.
ಪೊಲೀಸರ ಜತೆಗಿನ ಸಂಘರ್ಷ ಹಾಗೂ ಬಲವಂತದ ಪ್ರವೇಶದಿಂದಾಗಿ ಸಾವಿರಾರು ಭಕ್ತರಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು ಹಾಗೂ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.