ಮೊಂತಾ ಚಂಡಮಾರುತ: ಆಂಧ್ರ, ಒಡಿಶಾ, ತಮಿಳುನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ
ಸಾಂದರ್ಭಿಕ ಚಿತ್ರ
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮೊಂತಾ ಚಂಡಮಾರುತ ಎದ್ದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಒಡಿಶಾ ಮತ್ತು ತಮಿಳುನಾಡಿನ ಕರಾವಳಿ ಭಾಗದಲ್ಲಿ 90-100 ಕಿಲೋಮೀಟರ್ ವೇಗದ ರಭಸದ ಗಾಳಿ ಬೀಸಲಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ವಾರದ ಆರಂಭದಿಂದಲೇ ಈ ಮೂರು ರಾಜ್ಯಗಳಲ್ಲಿ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ನೀಡಲಾಗಿದೆ.
ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಅ.27ರಿಂದ ಭಾರಿ ಮಳೆಯಾಗಲಿದ್ದು, ಮೊಂತಾ ಚಂಡಮಾರುತ ರಾಜ್ಯದ ಮಚಲೀಪಟ್ಟಣ ಮತ್ತು ಕಾಳಿಂಗಪಟ್ಟಣಂ ಪ್ರದೇಶವನ್ನು ದಾಟಲಿದೆ. ಅ.28ರಂದು ಕಾಕಿನಾಡವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ವಿಕೋಪ ಎದುರಿಸಲು ಸರ್ವಸನ್ನದ್ಧವಾಗಿವೆ.
ಶನಿವಾರ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತ ಪಶ್ಚಿಮಾಭಿಮುಖವಾಗಿ ಚಲಿಸಿ ಪೋರ್ಟ್‍ಬ್ಲೇರ್ ನಿಂದ 460 ಕಿಲೋಮೀಟರ್ ದೂರದಲ್ಲಿ ಕೇಂದ್ರಿತವಾಗಿದೆ. ಆಂಧ್ರ ಕರಾವಳಿಯಲ್ಲಿ 45-55 ಕಿಲೋಮೀಟರ್ ವೇಗದ ಗಾಳಿ ಬೀಸಲಿದೆ ಎಂದು ಇಲಾಖೆಯ ಅಮರಾವತಿ ವಿಜ್ಞಾನಿ ಎಸ್.ಕರುಣಾಸಾಗರ ಹೇಳಿದ್ದಾರೆ. ಅ.27 ರಿಂದ 29ರವರೆಗೆ ಆಂಧ್ರದಲ್ಲಿ ವ್ಯಾಪಕ ಮಳೆಯಾಗಲಿದೆ.
ಒಡಿಶಾದಲ್ಲಿ 90 ರಿಂದ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಸಂಭಾವ್ಯ ಒಕ್ಕಲೆಬ್ಬಿಸುವಿಕೆಗಾಗಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಚಂಡಮಾರುತಕ್ಕೆ ತುತ್ತಾಗುವ 15 ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಕಂದಾಯ ಮತ್ತು ವಿಕೋಪ ನಿರ್ವಹಣೆ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ. ಅ.28 ಮತ್ತು 29ರಂದು ಈ ಭಾಗದಲ್ಲಿ ವ್ಯಾಪಕ ಮಳೆಯಾಗಲಿದ್ದು, 9 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.