ಆಂಧ್ರಪ್ರದೇಶ | ಕಾಲೇಜು ಕಟ್ಟಡದಿಂದ ಜಿಗಿದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ಕಾಲೇಜು ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿದ ಕುಟುಂಬಸ್ಥರು
Photo | NDTV
ಚಿತ್ತೂರು : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ವಸತಿ ನಿಲಯದ ನಾಲ್ಕನೆಯ ಮಹಡಿಯಿಂದ ಕೆಳಕ್ಕೆ ಜಿಗಿದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಕುಪ್ಪಂನ ಪಿಇಎಸ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಪಲ್ಲವಿ(19) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪಲ್ಲವಿ ಗುರುವಾರ ಸಂಜೆ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಲ್ಲವಿ ವಿದ್ಯಾರ್ಥಿ ನಿಲಯದ ಕಟ್ಟಡದಿಂದ ಕೆಳಕ್ಕೆ ಜಿಗಿಯುತ್ತಿರುವುದು ಹಾಗೂ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಆಕೆಯ ನೆರವಿಗೆ ದೌಡಾಯಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಪಲ್ಲವಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪಲ್ಲವಿ ಆತ್ಮಹತ್ಯೆಗೆ ಕಾಲೇಜು ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಾಲೇಜಿನ ಸಿಬ್ಬಂದಿಗಳು ನಮ್ಮ ಪುತ್ರಿಗೆ ಸೂಕ್ತ ರಕ್ಷಣೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೃತ ಪಲ್ಲವಿಯ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.