ಆಂಧ್ರಪ್ರದೇಶ | ಸಾಲ ಪಾವತಿಸದ ಪತಿ : ಪತ್ನಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು
Photo | NDTV
ನಾರಾಯಣಪುರಂ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪತಿ ಸಾಲ ಪಾವತಿಸಿಲ್ಲ ಎಂದು ಪತ್ನಿಯನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿತ್ತೂರು ಜಿಲ್ಲೆಯ ನಾರಾಯಣಪುರಂ ಎಂಬಲ್ಲಿ ತಿಮ್ಮರಾಯಪ್ಪ ಎಂಬಾತ ಮುನಿಕಣ್ಣಪ್ಪ ಎಂಬವರಿಂದ 80,000ರೂ. ಸಾಲವನ್ನು ಪಡೆದಿದ್ದ. ಆದರೆ ಸಾಲದ ಹಣವನ್ನು ಮರುಪಾವತಿಸದೆ ಪತ್ನಿ ಜೊತೆ ಬೆಂಗಳೂರಿಗೆ ತೆರಳಿದ್ದ. ತಿಮ್ಮರಾಯಪ್ಪನ ಪತ್ನಿ ಸಿರಿಷಾ ಸೋಮವಾರ ತನ್ನ ಮಕ್ಕಳ ವರ್ಗಾವಣೆ ಪ್ರಮಾಣಪತ್ರವನ್ನು (ಟಿಸಿ) ಪಡೆಯಲು ನಾರಾಯಣಪುರಕ್ಕೆ ಬಂದಿದ್ದಳು. ಆಗ ಸಾಲವನ್ನು ಮರುಪಾವತಿಸುವಂತೆ ಆಗ್ರಹಿಸಿದ ಸ್ಥಳೀಯರು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕುಪ್ಪಂ ಡಿಎಸ್ಪಿ ಬಿ ಪಾರ್ಥಸಾರಥಿ, ದಂಪತಿ ಮುನಿಕಣ್ಣಪ್ಪ ಎಂಬ ಗ್ರಾಮಸ್ಥನಿಗೆ 80,000ರೂ. ಸಾಲ ಬಾಕಿ ಉಳಿಸಿಕೊಂಡಿದ್ದರು. ಇದರಿಂದ ಸ್ಥಳೀಯರು ಸಿರಿಷಾಳನ್ನು ಮರಕ್ಕೆ ಕಟ್ಟಿಹಾಕಿ ಹಣ ಮರುಪಾವತಿಸಲು ಪತಿಗೆ ಕರೆ ಮಾಡುವಂತೆ ಆಗ್ರಹಿಸಿದ್ದಾರೆ. ಆ ಬಳಿಕ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 115, 126, ಮತ್ತು 112ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ನನ್ನ ಪತಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನನ್ನನ್ನು ಬಿಟ್ಟುಹೋಗಿದ್ದಾನೆ ಎಂದು ಸಿರಿಷಾ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಕುಪ್ಪಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಘಟನೆಯನ್ನು ಖಂಡಿಸಿದ್ದಾರೆ. ಅರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.