ಅಂಕಿತಾ ಭಂಡಾರಿ ಹತ್ಯೆ; ಏನಿದು ಪ್ರಕರಣ, ಪ್ರತಿಭಟನೆಗಳು ಮತ್ತೆ ಭುಗಿಲೆದ್ದಿದ್ದು ಯಾಕೆ?
Photo: NDTV
ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಹಿರಿಯ ಬಿಜೆಪಿ ನಾಯಕರೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಂಕಿತಾ ಹತ್ಯೆಯಾಗಿ ಮೂರು ವರ್ಷಗಳ ನಂತರ ಹಾಗೂ ಪ್ರಕರಣದ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದ ಏಳು ತಿಂಗಳ ಬಳಿಕ ಈ ಆರೋಪಗಳು ಹೊರಬಿದ್ದಿದ್ದು, ಉತ್ತರಾಖಂಡದಾದ್ಯಂತ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳು ಇಡೀ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುತ್ತಿವೆ. ಆಡಳಿತ ಪಕ್ಷ ಬಿಜೆಪಿಯ ಕೆಲ ಹಿರಿಯ ನಾಯಕರು ಸಿಬಿಐ ತನಿಖೆಯ ಬೇಡಿಕೆಯನ್ನು ಬೆಂಬಲಿಸಿದರೂ, ಪಕ್ಷದ ಆಡಳಿತ ಮಂಡಳಿ ಈ ಕುರಿತು ಯಾವುದೇ ಸ್ಪಷ್ಟ ಬದ್ಧತೆ ತೋರಿಸಿಲ್ಲ.
ಏನಿದು ಪ್ರಕರಣ?
19 ವರ್ಷದ ಅಂಕಿತಾ ಭಂಡಾರಿ, ಋಷಿಕೇಶ ಸಮೀಪದ ವನಂತರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸಕ್ಕೆ ಸೇರಿ ಒಂದು ತಿಂಗಳೂ ಆಗಿರಲಿಲ್ಲ. ಸೆಪ್ಟೆಂಬರ್ 2022ರಲ್ಲಿ ಅವರು ನಾಪತ್ತೆಯಾಗಿದ್ದರು. ಆರು ದಿನಗಳ ಬಳಿಕ ಅವರ ಶವ ಕಾಲುವೆಯಲ್ಲಿ ಪತ್ತೆಯಾಯಿತು.
ಐಪಿಎಸ್ ಅಧಿಕಾರಿ ರೇಣುಕಾ ದೇವಿ ನೇತೃತ್ವದ ವಿಶೇಷ ತನಿಖಾ ತಂಡ (SIT) ಪ್ರಕರಣದ ತನಿಖೆ ನಡೆಸಿತು. ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಅಪರಾಧ ಸ್ಥಳವನ್ನು ಮರುಸೃಷ್ಟಿಸಿ, ವಿಧಿವಿಜ್ಞಾನ ವಿಶ್ಲೇಷಣೆ ನಡೆಸಲಾಯಿತು. ಈ ತನಿಖೆಯಲ್ಲಿ ಅಂಕಿತಾಳನ್ನು ಹತ್ಯೆ ಮಾಡಿ ಕಾಲುವೆಗೆ ತಳ್ಳಲಾಗಿದೆ ಎಂಬುದು ಪತ್ತೆಯಾಯಿತು.
ರೆಸಾರ್ಟ್‌ನ ಮಾಲೀಕ, ಬಿಜೆಪಿಯ ಮಾಜಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಹಾಗೂ ಅವರ ಸಹಚರರು ಈ ಕೊಲೆ ನಡೆಸಿದ್ದಾರೆ ಎಂದು ಎಸ್‌ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ಲೈಂಗಿಕ ಸೇವೆಗಳನ್ನು ಒದಗಿಸಲು ಅಂಕಿತಾ ನಿರಾಕರಿಸಿದ್ದೇ ಕೊಲೆಗೆ ಕಾರಣ ಎಂದು ತನಿಖೆ ಹೇಳಿದೆ.
ಜನವರಿ 30, 2023ರಂದು 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 302 (ಕೊಲೆ), 354A (ಲೈಂಗಿಕ ಕಿರುಕುಳ), 201 (ಸಾಕ್ಷ್ಯ ನಾಶ) ಹಾಗೂ ಗ್ಯಾಂಗ್‌ಸ್ಟರ್ಸ್ ಕಾಯ್ದೆಯಡಿ ಆರೋಪಗಳನ್ನು ಪಟ್ಟಿ ಮಾಡಲಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಕೋಟ್ದ್ವಾರ್ ನ್ಯಾಯಾಲಯವು ಆರ್ಯ ಮತ್ತು ಅವರ ಇಬ್ಬರು ಸಹಚರರಾದ ಸೌರಭ್ ಭಾಸ್ಕರ್ ಹಾಗೂ ಅಂಕಿತ್ ಗುಪ್ತಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ತನಿಖೆಯ ಆರಂಭದಿಂದಲೇ ವಿಐಪಿ ಭಾಗಿಯಾಗಿರುವ ಬಗ್ಗೆ ವದಂತಿಗಳು ಹರಡಿದ್ದವು. ಆದರೆ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನಂತರ, ಇತ್ತೀಚೆಗೆ ಸೋರಿಕೆಯಾದ ಆಡಿಯೋ ಕಾರಣದಿಂದ ಊಹಾಪೋಹಗಳು ಹೆಚ್ಚಾಗಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ.
“ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗಿದೆ. ಹೌದು, ಅದರಲ್ಲಿ ವಿಐಪಿ ಬಗ್ಗೆ ಉಲ್ಲೇಖವಿತ್ತು. ಆದರೆ ಅದು ವಿಐಪಿ ಕೊಠಡಿಗೆ ಸಂಬಂಧಪಟ್ಟದ್ದು. ಮೂವರು ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿದ ಆಧಾರದ ಮೇಲೆ ನಾವು ಸಂಗ್ರಹಿಸಿದ ಮಾಹಿತಿ ಇದಾಗಿದೆ” ಎಂದು ತನಿಖೆಯ ಭಾಗವಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಘಟನೆಯ ನಂತರ ವನಂತರಾ ರೆಸಾರ್ಟ್ ಅನ್ನು ಭಾಗಶಃ ಕೆಡವಿ, ಅಂದಿನಿಂದ ಮುಚ್ಚಲಾಗಿದೆ.
ಊರ್ಮಿಳಾ ಸನವಾರ್ ಹೇಳಿದ್ದೇನು?
ಹರಿದ್ವಾರದ ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರ ಎರಡನೇ ಪತ್ನಿ ಎಂದು ಹೇಳಿಕೊಳ್ಳುವ ಊರ್ಮಿಳಾ ಸನವಾರ್ ಕೆಲವು ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ ಹೊಸ ಪ್ರತಿಭಟನೆಗಳು ಭುಗಿಲೆದ್ದವು. ಆರಂಭದಲ್ಲಿ ಅವರು “ಗಟ್ಟು” ಎಂಬ ನಾಯಕನಿಗೆ “ಹೆಚ್ಚುವರಿ ಸೇವೆಗಳನ್ನು” ನೀಡಲು ನಿರಾಕರಿಸಿದ್ದಕ್ಕಾಗಿ ಅಂಕಿತಾಳನ್ನು ಕೊಲ್ಲಲಾಗಿದೆ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ನಂತರ ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊದಲ್ಲಿ, ತಮ್ಮ ಮತ್ತು ರಾಥೋಡ್ ನಡುವಿನ ಸಂಭಾಷಣೆಯ ಆಡಿಯೋವನ್ನು ಪ್ಲೇ ಮಾಡಿದ್ದಾರೆ. ಇದರಿಂದ ಉತ್ತರಾಖಂಡದ ಉಸ್ತುವಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ವಿರುದ್ಧ ಆರೋಪಗಳು ಕೇಳಿಬಂದವು.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಗೌತಮ್, ಸನವಾರ್ ಬಿಜೆಪಿಗೆ ಮಾನಹಾನಿ ಉಂಟುಮಾಡುತ್ತಿದ್ದು, ಆ ಆಡಿಯೋ ಕ್ಲಿಪ್‌ಗಳು ಎಐ ಮೂಲಕ ಸೃಷ್ಟಿಸಲ್ಪಟ್ಟವು ಎಂದು ಹೇಳಿದ್ದಾರೆ. ಐಟಿ ಕಾಯ್ದೆಯಡಿ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಸನವಾರ್ ಮತ್ತು ರಾಥೋಡ್ ವಿರುದ್ಧ ಹರಿದ್ವಾರ ಹಾಗೂ ಡೆಹ್ರಾಡೂನ್‌ನಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಸಿಬಿಐ ತನಿಖೆಗೆ ಒತ್ತಾಯಿಸಿದ ಕುಟುಂಬ
ಸನವಾರ್ ಹೇಳಿಕೆಯ ನಂತರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಅಂಕಿತಾ ಭಂಡಾರಿ ಅವರ ತಂದೆ, ತಮ್ಮ ಮಗಳನ್ನು “ವಿಐಪಿ” ಕಾರಣದಿಂದ ಕೊಲೆ ಮಾಡಲಾಗಿದೆ. ಆದರೆ ಆ ವ್ಯಕ್ತಿಯ ಗುರುತು ಇನ್ನೂ ಬಹಿರಂಗವಾಗಿಲ್ಲ ಎಂದು ಹೇಳಿದ್ದಾರೆ. ವಿಐಪಿಯನ್ನು ಬಂಧಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಅವರು ಮನವಿ ಮಾಡಿದ್ದಾರೆ.
ರಾಜಕೀಯ ಜಟಾಪಟಿ
ಅಂಕಿತಾ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಎಸ್‌ಐಟಿ ತನಿಖೆಯಲ್ಲಿನ ಹಲವು “ಲೋಪದೋಷಗಳನ್ನು” ಪಕ್ಷ ಎತ್ತಿ ತೋರಿಸಿದ್ದು, ಬಿಜೆಪಿ ತನ್ನ ಹಿರಿಯ ನಾಯಕರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.
ಅಂಕಿತಾ ಅವರ ಮೃತದೇಹ ಪತ್ತೆಯಾದ ನಂತರ ಸ್ಥಳೀಯ ಬಿಜೆಪಿ ಶಾಸಕಿ ರೇಣು ಬಿಶ್ತ್ ಅವರ ಆದೇಶದ ಮೇರೆಗೆ ಸಾಕ್ಷ್ಯಗಳನ್ನು “ನಾಶಪಡಿಸಲು” ರೆಸಾರ್ಟ್‌ನ ಕೆಲವು ಭಾಗಗಳನ್ನು ಕೆಡವಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಏತನ್ಮಧ್ಯೆ, ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿರುವ ದುಷ್ಯಂತ್ ಗೌತಮ್, ಅವು ನಿಜವೆಂದು ಸಾಬೀತಾದರೆ ತಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಸನವಾರ್–ರಾಥೋಡ್ ಯಾರು?
ಊರ್ಮಿಳಾ ಸನವಾರ್ ಮತ್ತು ಸುರೇಶ್ ರಾಥೋಡ್ ಸುದ್ದಿಯಾಗಿರುವುದು ಇದೇ ಮೊದಲಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಏಕರೂಪ ನಾಗರಿಕ ಸಂಹಿತೆಯಡಿ ಬಹುಪತ್ನಿತ್ವ ನಿಷೇಧವನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಥೋಡ್ ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಲಾಗಿತ್ತು. ಬಳಿಕ ರಾಥೋಡ್, ನಾವು ಮದುವೆಯಾಗಿಲ್ಲ; ಸಿನಿಮಾಕ್ಕಾಗಿ ಹೀಗೆ ಜತೆಯಾಗಿ ನಟಿಸಿದ್ದೇವೆ ಎಂದು ಹೇಳಿದ್ದರು.
ತನಿಖೆಗೆ ಒತ್ತಾಯಿಸಿದ ಬಿಜೆಪಿ ನಾಯಕರು
ಹರಿದ್ವಾರ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಯಾವುದೇ ನಾಯಕರು ಎಷ್ಟೇ ಹಿರಿಯರಾಗಿದ್ದರೂ ಗಂಭೀರ ಆರೋಪಗಳಿದ್ದರೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಹಿರಿಯ ಬಿಜೆಪಿ ನಾಯಕಿ ಹಾಗೂ ಮಾಜಿ ಸಚಿವೆ ವಿಜಯ ಬರ್ತ್ವಾಲ್ ಕೂಡ ಹೊಸ ತನಿಖೆಗೆ ಒತ್ತಾಯಿಸಿದ್ದಾರೆ.
“ಉತ್ತರಾಖಂಡದಲ್ಲಿ ಇದು ನಡೆದಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ಹೆಣ್ಣುಮಕ್ಕಳ ಮೇಲೆ ಅನ್ಯಾಯ ಮುಂದುವರಿದರೆ, ನಾವು ದೇವಭೂಮಿಯ ನಿವಾಸಿಗಳೆಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಆರೋಪಿಗಳಿಗೆ ಶಿಕ್ಷೆ ವಿಧಿಸಿದರೂ ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ” ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಸನವಾರ್ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಅರಣ್ಯ ಸಚಿವ ಸುಬೋಧ್ ಉನಿಯಾಲ್ ಆರೋಪಗಳಿಗೆ ಪುರಾವೆ ತರುವಂತೆ ಹೇಳಿದ್ದಾರೆ. ಬಿಜೆಪಿ ರಾಜ್ಯಸಭಾ ಸಂಸದ ನರೇಶ್ ಬನ್ಸಾಲ್, ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಚಳುವಳಿ “ರಾಜಕೀಯ ಹಾಗೂ ಅರಾಜಕತಾವಾದಿ ಶಕ್ತಿಗಳ ಕೈಗೆ ಬೀಳುತ್ತಿದೆ” ಎಂದು ಟೀಕಿಸಿದ್ದಾರೆ.
UKSSSC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ ನಡೆದ ಭಾರೀ ಪ್ರತಿಭಟನೆಗಳ ಬಳಿಕ, ಹೊಸ ಪ್ರತಿಭಟನೆಗಳು ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ತರುತ್ತಿವೆ. ಹೆಚ್ಚಿದ ವಲಸೆ ಮತ್ತು ನಿರುದ್ಯೋಗ ಬಿಕ್ಕಟ್ಟಿನ ಕುರಿತೂ ಜನರಲ್ಲಿ ಆಕ್ರೋಶವಿದೆ.
ಏನಂತಾರೆ ಧಾಮಿ?
ಅಂಕಿತಾ ಕೊಲೆ ಪ್ರಕರಣದ ತನಿಖೆಯಲ್ಲಿ ಯಾರನ್ನೂ ರಕ್ಷಿಸಿಲ್ಲ ಮತ್ತು ಮುಂದೆಯೂ ರಕ್ಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ. ಅಂಕಿತಾ ಅವರ ಪೋಷಕರನ್ನು ಭೇಟಿ ಮಾಡಿದ ಅವರು, ಆಕೆಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಪೌರಿಯಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜು ದೋಭ್ (ಶ್ರೀಕೋಟ್) ಅನ್ನು ‘ದಿವಂಗತ ಅಂಕಿತಾ ಭಂಡಾರಿ ಸರ್ಕಾರಿ ನರ್ಸಿಂಗ್ ಕಾಲೇಜು’ ಎಂದು ಮರುನಾಮಕರಣ ಮಾಡುವುದಾಗಿ ಅವರು ಘೋಷಿಸಿದ್ದಾರೆ.
ಆದರೆ, ಪ್ರತಿಭಟನಾಕಾರರು ಈ ಭೇಟಿಯನ್ನು ತೋರಿಕೆಗೆ ಮಾಡಿದ ಕ್ರಮ ಎಂದು ಟೀಕಿಸಿದ್ದಾರೆ.
ವಿರೋಧ ಪಕ್ಷದ ನಿಲುವೇನು?
ಉತ್ತರಾಖಂಡದಲ್ಲಿ ಬಿಜೆಪಿಯ ಪ್ರಭಾವವನ್ನು ಕುಗ್ಗಿಸಲು ವಿರೋಧ ಪಕ್ಷಗಳು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಕಾಂಗ್ರೆಸ್ ಸಣ್ಣ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡರೆ, ಉತ್ತರಾಖಂಡ ಕ್ರಾಂತಿ ದಳದಂತಹ ಪಕ್ಷಗಳು 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಸವಾಲು ನೀಡಬಹುದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಾನಾ, “2027ರ ಚುನಾವಣೆಯ ಬಗ್ಗೆ ಪಕ್ಷಕ್ಕೆ ಭರವಸೆ ಇದೆ. ಆದರೆ INDIA ಮೈತ್ರಿಕೂಟದ ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತ್ರ ಕೈಜೋಡಿಸುತ್ತೇವೆ” ಎಂದು ಹೇಳಿದ್ದಾರೆ.
ಅಂಕಿತಾ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕಾಂಗ್ರೆಸ್ “ನ್ಯಾಯ್ ಯಾತ್ರೆ” ಆರಂಭಿಸಲು ನಿರ್ಧರಿಸಿದ್ದು, ಮೇಣದಬತ್ತಿ ಪ್ರತಿಭಟನೆಗಳ ನಂತರ ಈ ಯಾತ್ರೆ ರಾಜ್ಯದಾದ್ಯಂತ 70 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರಲಿದೆ.