×
Ad

ಜೆಎನ್‌ಯು ಕ್ಯಾಂಪಸ್ ಗೋಡೆಗಳಲ್ಲಿ ದಲಿತ ವಿರೋಧಿ ಘೋಷಣೆ : NSUI ಆರೋಪ

Update: 2024-07-20 21:12 IST

PC : PTI 

ಹೊಸದಿಲ್ಲಿ : ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗೋಡೆಗಳಲ್ಲಿ ಜಾತಿವಾದಿ ನಿಂದನೆಗಳು ಹಾಗೂ ಕೋಮ ಘೋಷಣೆಗಳು ಶನಿವಾರ ಕಂಡು ಬಂದಿವೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ NSUI ಆರೋಪಿಸಿದೆ.

‘ದಲಿತ್ ಭಾರತ್ ಚೋಡೋ’ (ದಲಿತರೇ ಭಾರತ ಬಿಟ್ಟು ತೊಲಗಿ). ‘ಬ್ರಾಹ್ಮಣ ಬನಿಯಾ ಜಿಂದಾಬಾದ್’ ಹಾಗೂ ‘ಆರ್‌ಎಸ್ ಜಿಂದಾಬಾದ್’ ಘೋಷಣೆಗಳು ಕ್ಯಾಂಪಸ್‌ನ ಕಾವೇರಿ ಹಾಸ್ಟೆಲ್‌ನ ಗೋಡೆಗಳಲ್ಲಿ ಕಂಡು ಬಂದಿವೆ ಎಂದು ಅದರ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ NSUI ಘಟಕದ ಪ್ರಧಾನ ಕಾರ್ಯದರ್ಶಿ ಕುನಾಲ್ ಕುಮಾರ್ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೊಗಳು ಹರಿದಾಡುತ್ತಿದ್ದಂತೆ ವಿಶ್ವವಿದ್ಯಾನಿಲಯದ ಆಡಳಿತ ಗೋಡೆಗಳಿಗೆ ಬಣ್ಣ ಬಳಿದು ಅದನ್ನು ಅಳಿಸಿದೆ. ಈ ಆರೋಪದ ಕುರಿತಂತೆ ವಿದ್ಯಾರ್ಥಿ ಡೀನ್ ಮನುರಾಧಾ ಚೌಧರಿ ಅವರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ಕಾವೇರಿ ಹಾಸ್ಟೆಲ್‌ನ ವಾರ್ಡನ್ ಮನೀಷ್ ಕುಮಾರ್ ಬರ್ನ್ವಾಲ್ ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಇತ್ತೀಚೆಗೆ ಕಾವೇರಿ ಹಾಸ್ಟೆಲ್‌ನಲ್ಲಿ ನಡೆದ ಘಟನೆ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾನವರಾದ ನಮಗೆ ತೀವ್ರ ಆಘಾತವನ್ನುಂಟು ಮಾಡಿದೆ. ದಲಿತ ಬಹುಜನ ಸಮುದಾಯದ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ. ಇದರೊಂದಿಗೆ ಬ್ರಾಹ್ಮಣ ಬನಿಯಾ ಜಿಂದಾಬಾದ್, ಆರ್‌ಎಸ್‌ಎಸ್ ಜಿಂದಾಬಾದ್‌ನಂತಹ ಘೋಷಣೆಗಳನ್ನು ಬರೆಯಲಾಗಿದೆ’’ ಎಂದು ಅವರು ಹೇಳಿದ್ದಾರೆ.

‘‘ಈ ಘೋಷಣೆಗಳು ನಮ್ಮ ವಿಶ್ವವಿದ್ಯಾನಿಲಯ ಸಮುದಾಯದ ಒಳಗೆ ಆರ್‌ಎಸ್‌ಎಸ್ ಹಾಗೂ ಅದರ ಬೆಂಬಲಿಗರ ಬ್ರಾಹ್ಮಣ್ಯ ಹಾಗೂ ಮನುವಾದಿ ನಿಲುವನ್ನು ಸ್ಪಷ್ಟವಾಗಿ ಬಹಿರಂಗಗೊಳಿಸಿದೆ’’ ಎಂದು NSUI ಹೇಳಿಕೆ ತಿಳಿಸಿದೆ.

ವಿಶ್ವವಿದ್ಯಾನಿಲಯದ ಆಡಳಿತ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ NSUI ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News