ಕೇರಳದ ನರ್ಸ್ ನಿಮಿಷಪ್ರಿಯ ಬಿಡುಗಡೆಗಾಗಿ ಬಿರುಸುಗೊಂಡ ಚಟುವಟಿಕೆ | ಮಧ್ಯಪ್ರವೇಶಿಸಿದ ಎ ಪಿ ಉಸ್ತಾದ್; ಯೆಮೆನ್ ಸರ್ಕಾರದೊಂದಿಗೆ ಮಾತುಕತೆ: ವರದಿ
ಕೋಝಿಕೋಡ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮೆನ್ ಜೈಲಿನಲ್ಲಿ ಸೆರೆವಾಸದಲ್ಲಿರುವ ಕೇರಳದ ನರ್ಸ್ ನಿಮಿಷಪ್ರಿಯಾ ಅವರನ್ನು ಬಿಡುಗಡೆಗೊಳಿಸಲು ತೀವ್ರ ಚಟುವಟಿಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ನಾಯಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಯೆಮೆನ್ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ReporterLive.com ವರದಿ ಮಾಡಿದೆ.
ವಿದೇಶದ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಪ್ರಿಯರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಮಟ್ಟಗಳಲ್ಲಿ ಮಾತುಕತೆ ನಡೆಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ತಕ್ಷಣದ ಹಸ್ತಕ್ಷೇಪಕ್ಕೆ ಮನವಿ ಪತ್ರ ಕಳುಹಿಸಿದ್ದಾರೆ.
ಸಂಸದ ಕೆ.ಸಿ. ವೇಣುಗೋಪಾಲ್ ಅವರು ಕೂಡ ಪ್ರಧಾನಿಗೆ ಮತ್ತೊಂದು ಪತ್ರ ಬರೆದು, "ಇನ್ನು ಕೇವಲ ನಾಲ್ಕು ದಿನ ಮಾತ್ರ ಉಳಿದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕರಣವನ್ನು ತುರ್ತು ಎಂದು ಪರಿಗಣಿಸಬೇಕು, ರಾಜ್ಯದ ಸಚಿವರುಗಳ ನೇತೃತ್ವದಲ್ಲಿ ನಿಯೋಗವು ಕೇಂದ್ರ ಸರ್ಕಾರವನ್ನು ಭೇಟಿಯಾಗಿ ಈ ಕುರಿತಂತೆ ಒತ್ತಾಯಿಸಬೇಕು" ಎಂದು ಅವರು ಆಗ್ರಹಿಸಿದ್ದರು.
ಈ ಮಧ್ಯೆ, ನಿಮಿಷಪ್ರಿಯಾ ಪರವಾಗಿ ಹಲವು ರಾಜಕೀಯ ನಾಯಕರು ಹಾಗೂ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸದರಾದ ಕೆ. ರಾಧಾಕೃಷ್ಣನ್, ಜಾನ್ ಬ್ರಿಟ್ಟಾಸ್, ಕೋಡಿಕುನ್ನಿಲ್ ಸುರೇಶ್, ಶಾಸಕ ಚಾಂಡಿ ಉಮ್ಮನ್, ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ಹಾಗೂ ಕೇರಳ ಕಾಂಗ್ರೆಸ್ ಎಂ ಅಧ್ಯಕ್ಷ ಜೋಸ್ ಕೆ. ಮಣಿ ಅವರೂ ಮಧ್ಯಪ್ರವೇಶಕ್ಕೆ ಮುಂದಾಗಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಪ್ರಿಯಾ 2017 ರಿಂದ ಯೆಮೆನ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಯೆಮೆನ್ ಪ್ರಜೆ ತಲಾಲ್ ಅಬ್ದು ಮಹ್ದಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರು ತಪ್ಪಿತಸ್ಥರೆಂದು ಮರಣದಂಡನೆ ವಿಧಿಸಲಾಗಿದೆ. ಈ ತೀರ್ಪು ಜುಲೈ 16 ರಂದು ಜಾರಿಗೊಳಿಸಲಾಗುವುದು ಎಂದು ಯೆಮೆನ್ ಸುಪ್ರೀಂ ಕೋರ್ಟ್ ಈಗಾಗಲೇ ತಿಳಿಸಿದೆ.
ಇದೀಗ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಸರ್ಕಾರದೊಂದಿಗಿನ ನೇರ ಮಾತುಕತೆ, ಮೃತ ಯೆಮೆನ್ ನಾಗರಿಕನ ಸಂಬಂಧಿಕರೊಂದಿಗೆ ನಡೆಸಿದ ಸಂವಾದದಿಂದ ಪ್ರಕರಣ ಪರಿಹಾರವಾಗುವ ಭರವಸೆ ಮೂಡಿದೆ. ಈ ಬೆಳವಣಿಗೆಗಳು ನಿಮಿಷಪ್ರಿಯ ಬಿಡುಗಡೆಯ ಆಶಾಭಾವನೆ ಮೂಡಿಸಿದೆ.