ಉತ್ತರಪ್ರದೇಶ | ಟೋಲ್ ಪ್ಲಾಝಾದಲ್ಲಿ ಸೇನಾ ಸಿಬ್ಬಂದಿಗೆ ಥಳಿತ : ನಾಲ್ವರು ಆರೋಪಿಗಳ ಬಂಧನ
Photo | indiatoday
ಉತ್ತರಪ್ರದೇಶ : ಮೀರತ್‌ನಲ್ಲಿರುವ ಟೋಲ್ ಪ್ಲಾಝಾದಲ್ಲಿ ಸೇನಾ ಸಿಬ್ಬಂದಿಯೋರ್ವರ ಮೇಲೆ ಟೋಲ್ ಸಿಬ್ಬಂದಿಗಳು ಅಮಾನವೀಯವಾಗಿ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಯೋಧನನ್ನು ಕಂಬಕ್ಕೆ ಬಿಗಿಯಾಗಿ ಹಿಡಿದು ಗುಂಪೊಂದು ಥಳಿಸುತ್ತಿರುವುದು ಕಂಡು ಬಂದಿದೆ.
ಈ ಘಟನೆ ರವಿವಾರ ರಾತ್ರಿ ಸರೂರ್ಪುರ ಪೊಲೀಸ್ ಠಾಣೆ ಪ್ರದೇಶದ ಭುನಿ ಟೋಲ್ ಪ್ಲಾಝಾದಲ್ಲಿ ಸಂಭವಿಸಿದೆ. ಜಮ್ಮುಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯೋಧ ಕಪಿಲ್ ತನ್ನ ಸ್ನೇಹಿತನ ಜೊತೆ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ಕರ್ನಾಲ್ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಝಾದಲ್ಲಿ ಟೋಲ್ ಶುಲ್ಕದ ಕುರಿತಾದ ವಾಗ್ವಾದದ ಬಳಿಕ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಕಪಿಲ್ ಅವರು ಸರೂರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಟ್ಕಾ ಗ್ರಾಮದ ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕಪಿಲ್ ಅವರ ಕುಟುಂಬದ ದೂರಿನ ಮೇರೆಗೆ ಸರೂರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.