ವಿಜಯ್ ಮಲ್ಯ, ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಒತ್ತಡ: ತಿಹಾರ್ ಜೈಲಿಗೆ ಬ್ರಿಟಿಷ್ ಅಧಿಕಾರಿಗಳ ಭೇಟಿ
PC | hindustantimes
ಹೊಸದಿಲ್ಲಿ: ವಂಚನೆ ಪ್ರಕರಣದ ಆರೋಪಿಗಳಾಗಿದ್ದು, ಪ್ರಸ್ತುತ ಬ್ರಿಟನ್‍ನಲ್ಲಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿಯನ್ನು ವಿಚಾರಣೆಗಾಗಿ ಗಡೀಪಾರು ಮಾಡುವಂತೆ ಭಾರತ ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್‍ನ ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸ್ (ಸಿಪಿಎಸ್) ತಂಡ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಭೇಟಿಯನ್ನು ಆಯೋಜಿಸಿದ್ದು, ಬ್ರಿಟನ್ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಗಡೀಪಾರು ಸಂಬಂಧದ ಕಾನೂನು ಪ್ರಕ್ರಿಯೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ಒದಗಿಸಿರುವ ಸೌಲಭ್ಯಗಳು ಮತ್ತು ಆರೈಕೆ ವ್ಯವಸ್ಥೆ ಬಗ್ಗೆ ಸಿಪಿಎಸ್ ತಂಡ ಸಮಾಧಾನ ವ್ಯಕ್ತಪಡಿಸಿದ್ದರೂ, ಅಗತ್ಯ ಬಿದ್ದರೆ, ಗಡೀಪಾರಾದ ಅತಿಗಣ್ಯರಿಗಾಗಿ ತಿಹಾರ್ ಸಂಕೀರ್ಣದಲ್ಲಿ ವಿಶೇಷ ಎನ್‍ಕ್ಲೇವ್ ಅಭಿವೃದ್ಧಿಪಡಿಸುವ ಭರವಸೆಯನ್ನು ಭಾರತೀಯ ಅಧಿಕಾರಿಗಳು ತಂಡಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಂತರರಾಷ್ಟ್ರೀಯ ನಿರೀಕ್ಷೆಗೆ ಅನುಗುಣವಾಗಿ ಅವರ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸುವ ಜತೆಗೆ ಅವರಿಗೆ ಇರುವ ಅಪಾಯವನ್ನು ನಿಭಾಯಿಸಲು ಈ ಸೌಲಭ್ಯ ಕಲ್ಪಿಸಲು ಬದ್ಧ ಎಂದು ಭವರಸೆ ನೀಡಿದ್ದಾರೆ.
ತ್ವರಿತವಾಗಿ ಗಡೀಪಾರು ಮಾಡುವಂತೆ ಭಾರತ ಮಾಡುತ್ತಿರುವ ಮನವಿಯ ಹಿನ್ನೆಲೆಯಲ್ಲಿ ಈ ತಂಡ ಅನುಕೂಲಕರ ಅಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಜುಲೈನಲ್ಲಿ ಈ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.