ಆಕ್ಸಿಯಮ್- 4 ಮಿಷನ್ ಉಡಾವಣೆಗೆ ಕ್ಷಣಗಣನೆ
ಹೊಸದಿಲ್ಲಿ: ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು ಹೊತ್ತ ಆಕ್ಸಿಯಮ್ 4 ಮಿಷನ್(Axiom-4 mission) ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ.
ಈ ಕುರಿತು ಸ್ಪೇಸ್ಎಕ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಆಕ್ಸಿಯಮ್ 4 ಮಿಷನ್ ಉಡಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 90 ಪ್ರತಿಶತ ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ತಿಳಿಸಿದೆ.
ತಾಂತ್ರಿಕ ತೊಂದರೆಗಳ ಕಾರಣಕ್ಕೆ ಹಲವು ಬಾರಿ ಆಕ್ಸಿಯಮ್ 4 ಮಿಷನ್ ಉಡಾವಣೆ ಮುಂದೂಡಲಾಗಿತ್ತು. ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಬುಧವಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನಾಸಾ ಮತ್ತು ಸ್ಪೇಸ್ಎಕ್ಸ್ ಮೂಲಗಳು ಖಚಿತಪಡಿಸಿವೆ.
ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ನತ್ತ ಪ್ರಯಾಣ ಬೆಳೆಸಲಿದೆ ಎಂದು ನಾಸಾ ಮತ್ತು ಸ್ಪೇಸ್ಎಕ್ಸ್ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿವೆ.
1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಇತಿಹಾಸ ನಿರ್ಮಿಸಿದ ನಾಲ್ಕು ದಶಕಗಳ ನಂತರ - ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಭಾರತದ ಎರಡನೇ ಗಗನಯಾತ್ರಿಯಾಗಲಿದ್ದಾರೆ.