ಬಾಲಾಸೋರ್ ಲೈಂಗಿಕ ಕಿರುಕುಳ ಪ್ರಕರಣ: ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು
ವಿದ್ಯಾರ್ಥಿನಿಯ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭೇಟಿಯಾದರು.
PC: x.com/the_hindu
ಹೊಸದಿಲ್ಲಿ: ಭೋದಕ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಆತ್ಮಾಹುತಿಗೆ ಪ್ರಯತ್ನಿಸಿದ್ದ ಒಡಿಶಾದ ಬಲಸೋರ್ ಎಫ್ಎಂ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮಂಗಳವಾರ ಪ್ರಕಟಿಸಿದ್ದಾರೆ.
ಎರಡು ದಿನ ಹಿಂದೆ ಆತ್ಮಾಹುತಿಗೆ ಪ್ರಯತ್ನಿಸಿದ ಎಫ್ಎಂ ಸ್ವಾಯತ್ತ ಕಾಲೇಜಿನ ಎರಡನೇ ವರ್ಷದ ಬಿಇಡಿ ವಿದ್ಯಾರ್ಥಿನಿಗೆ ಶೇಕಡ 90ರಷ್ಟು ಸುಟ್ಟಗಾಯಗಳಾಗಿತ್ತು. ಭುವನೇಶ್ವರ ಎಐಐಎಂಎಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ.
"ಎಫ್ಎಂ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯ ಸಾವಿನ ಸುದ್ದಿಯನ್ನು ಕೇಳಿ ತೀವ್ರ ದುಃಖವಾಯಿತು. ಎಲ್ಲ ಹೊಣೆಗಾರಿಕೆಗಳನ್ನು ಸರ್ಕಾರ ನಿರ್ವಹಿಸಿ, ವೈದ್ಯಕೀಯ ತಜ್ಞರ ತಂಡ ಅವಿರತವಾಗಿ ಶ್ರಮಿಸಿದ ಹೊರತಾಗಿಯೂ, ಸಂತ್ರಸ್ತೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ" ಎಂದು ಸಿಎಂ ಎಕ್ಸ್ ಪೋಸ್ಟ್ ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
"ಆಕೆಯ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬಕ್ಕೆ ಆಗಿರುವ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಜಗನ್ನಾಥ ಕರುಣಿಸಲಿ. ಪ್ರಕರಣದಲ್ಲಿ ತಪ್ಪಿತಸ್ಥರಸಿಗೆ ಕಾನೂನಿನ ಅನ್ವಯ ಸೂಕ್ತ ಶಿಕ್ಷೆಯಾಗುತ್ತದೆ ಎನ್ನುವ ಭರವಸೆಯನ್ನು ನಾನು ಕುಟುಂಬಕ್ಕೆ ನೀಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಟುಂಬದ ಜತೆ ಸರ್ಕಾರ ಸದಾ ಇರುತ್ತದೆ" ಎಂದು ವಿವರಿಸಿದ್ದಾರೆ.
ಕಾಲೇಜಿನ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜುಲೈ ಒಂದರಿಂದ ಕಾಲೇಜು ಪ್ರವೇಶ ದ್ವಾರದ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿ ಜುಲೈ 12ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.