ಬೆಂಗಳೂರು, ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ಅತಿ ಹೆಚ್ಚು ಹಕ್ಕಿ ಢಿಕ್ಕಿ ಪ್ರಕರಣಗಳು: ವರದಿ
PC : PTI
ಹೊಸದಿಲ್ಲಿ, ಜು. 27: 2020ರಿಂದ ಕಳೆದ ಐದೂವರೆ ವರ್ಷಗಳಲ್ಲಿ 10 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸುಮಾರು 2,800 ಹಕ್ಕಿ ಢಿಕ್ಕಿ ಪ್ರಕರಣಗಳು ವರದಿಯಾಗಿವೆ. ಹಕ್ಕಿ ಢಿಕ್ಕಿ ಪ್ರಕರಣಗಳಲ್ಲಿ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳು ಅಗ್ರ ಸ್ಥಾನಗಳಲ್ಲಿವೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಹಕ್ಕಿ ಢಿಕ್ಕಿ ಪ್ರಕರಣಗಳು ವರದಿಯಾಗಿವೆ. ಇಲ್ಲಿ 2020ರಿಂದ ಈ ವರ್ಷ ಜೂನ್ ವರೆಗೆ 695 ಹಕ್ಕಿ ಢಿಕ್ಕಿ ಪ್ರಕರಣಗಳು ವರದಿಯಾಗಿವೆ. ಮುಂಬೈಯಲ್ಲಿ 407 ಮತ್ತು ಬೆಂಗಳೂರಿನಲ್ಲಿ 343 ಪ್ರಕರಣಗಳು ದಾಖಲಾಗಿವೆ. 337 ಪ್ರಕರಣಗಳೊಂದಿಗೆ ಅಹ್ಮದಾಬಾದ್ 4ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 5ನೇ ಸ್ಥಾನದಲ್ಲಿದೆ.
ಚೆನ್ನೈ (205), ಕೋಲ್ಕತಾ (193), ಭುವನೇಶ್ವರ (150), ಪುಣೆ (145), ಹಾಗೂ ತಿರುವನಂತಪುರ (125) ಅನಂತರದ ಸ್ಥಾನಗಳಲ್ಲಿವೆ.
2020 ಹಾಗೂ 2021ರಲ್ಲಿ ಹಕ್ಕಿ ಢಿಕ್ಕಿ ಪ್ರಕರಣಗಳು ಕಡಿಮೆ ಇತ್ತು ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ರಾಜ್ಯ ಸಭೆಯಲ್ಲಿ ಕಳೆದ ವಾರ ಮಂಡಿಸಿದ ದತ್ತಾಂಶದ ವಿಶ್ಲೇಷಣೆ ತಿಳಿಸಿದೆ. ಈ ವರ್ಷಗಳಲ್ಲಿ ಕೋವಿಡ್ ನಿರ್ಬಂಧಗಳಿಂದಾಗಿ ವಿಮಾನ ಯಾನ ಸೇವೆಗಳು ಕಡಿಮೆ ಇದ್ದುದರಿಂದ ಹಕ್ಕಿ ಢಿಕ್ಕಿ ಪ್ರಕರಣಗಳು ಕಡಿಮೆಯಾಗಿದ್ದವು ಎಂದು ತಿಳಿದು ಬಂದಿದೆ.
2020ರಲ್ಲಿ 309 ಪ್ರಕರಣಗಳು ವರದಿಯಾಗಿದ್ದರೆ, 2021ರಲ್ಲಿ ಈ ಸಂಖ್ಯೆ 354ಕ್ಕೆ ಹಾಗೂ 2022ರಲ್ಲಿ ಈ ಸಂಖ್ಯೆ 588ಕ್ಕೆ ಏರಿಕೆಯಾಗಿದೆ. 2023ಕ್ಕೆ 709ಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ವರ್ಷ 609ಕ್ಕೆ ಇಳಿಕೆ ಆಗಿದೆ. ಈ ವರ್ಷ ಜೂನ್ ವರೆಗೆ 238 ಪ್ರಕರಣಗಳು ವರದಿಯಾಗಿವೆ.
ಪ್ರತಿ ವರ್ಷ ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ಇಂತಹ ಅತ್ಯಧಿಕ ಸಂಖ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2020ರಲ್ಲಿ 62, 2021ರಲ್ಲಿ 94, 2022ರಲ್ಲಿ 183, 2023ರಲ್ಲಿ 185, 2024ರಲ್ಲಿ 130 ಹಾಗೂ ಈ ವರ್ಷ ಜೂನ್ ವರೆಗೆ 41 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಸಂಖ್ಯೆಗಳು ಕ್ರಮವಾಗಿ 29, 22, 84, 85, 88 ಹಾಗೂ 35.
ವಿಮಾನ ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕ ವಿಮಾನ ಯಾನ ಸಚಿವಾಲಯ ವನ್ಯಜೀವಿ ಅಪಾಯ ನಿರ್ವಹಣಾ ಯೋಜನೆ (ಡಬ್ಲ್ಯುಎಚ್‌ಎಂಪಿ) ಅಭಿವೃದ್ಧಿಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದು ನಾಗರಿಕ ವಿಮಾನ ಯಾನ ರಾಜ್ಯ ಸಚಿವ ಮುರಳಿಧರ ಮಹೋಲ್ ಅವರು ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.