ಗಾಝಾ ಮಾದರಿಯಲ್ಲಿ ಬಾಂಗ್ಲಾದೇಶಕ್ಕೆ ಪಾಠ ಕಲಿಸಬೇಕು : ಸುವೇಂದು ಅಧಿಕಾರಿ
PC:PTI
ಕೊಲ್ಕತ್ತಾ: ಗಾಝಾದಲ್ಲಿ ಇಸ್ರೇಲ್ ಪಾಠ ಕಲಿಸಿದಂತೆ ಬಾಂಗ್ಲಾದೇಶಕ್ಕೆ ಪಾಠ ಕಲಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಶುಕ್ರವಾರ ಬಾಂಗ್ಲಾದೇಶದ ಉಪ ಹೈಕಮಿಷನರ್ ಕಚೇರಿ ಮುಂದೆ ಸುದ್ದಿಗಾರರ ಜತೆ ಮಾತನಾಡಿದ ಅವರು, "ಇಸ್ರೇಲ್ ಗಾಝಾದಲ್ಲಿ ಪಾಠ ಕಲಿಸಿದ ಮಾದರಿಯಲ್ಲೇ ಇವರಿಗೆ ಪಾಠ ಕಲಿಸಬೇಕು. ನಮ್ಮ 100 ಕೋಟಿ ಹಿಂದೂಗಳು ಮತ್ತು ಸರ್ಕಾರ ಹಿಂದುಗಳ ಹಿತಾಸಕ್ತಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದಂತೆ ಅವರಿಗೆ ಪಾಠ ಕಲಿಸಬೇಕು" ಎಂದು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಿದ್ಧ ಉಡುಪು ಕಾರ್ಮಿಕ, 27 ವರ್ಷದ ದೀಪು ಚಂದ್ರದಾಸ್ ಎಂಬಾತನನ್ನು ಗುಂಪು ಹತ್ಯೆ ಮಾಡಿರುವುದನ್ನು ವಿರೋಧಿಸಿ ಬಾಂಗ್ಲಾದೇಶ ಉಪ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅಧಿಕಾರಿ ಈ ಹೇಳಿಕೆನೀಡಿರುವುದು ಗಮನ ಸೆಳೆದಿದೆ. ಡಿಸೆಂಬರ್ 18ರಂದು ದಾಸ್ ಮೇಲೆ ದಾಳಿ ಮಾಡಿದ ಗುಂಪು ಅವರನ್ನು ಮರಕ್ಕೆ ನೇತಾಡಿಸಿ ಸಾರ್ವಜನಿಕರ ಸಮ್ಮುಖದಲ್ಲೇ ಬೆಂಕಿಹಚ್ಚಿ ಹತ್ಯೆ ಮಾಡಿತ್ತು.
ಬಾಂಗ್ಲಾದೇಶ ಉಪ ಹೈಕಮಿಷನರ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಐದು ಮಂದಿಯ ನಿಯೋಗದಲ್ಲಿ ಸುವೇಂದು ಅಧಿಕಾರಿಯೂ ಸೇರಿದ್ದರು. ಭೇಟಿಯ ಬಳಿಕ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಹತ್ಯೆ ಮತ್ತು ಸ್ಥಿತಿಯ ಬಗ್ಗೆ ಕೇಳಿದ ತಮ್ಮ ಬಹುತೇಕ ಪ್ರಶ್ನೆಗಳಿಗೆ ರಾಜತಾಂತ್ರಿಕ ಅಧಿಕಾರಿ ಬಳಿ ಉತ್ತರ ಇರಲಿಲ್ಲ ಎಂದು ಹೇಳಿದರು.
ಸುವೇಂದು ಹೇಳಿಕೆಯನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್, ಇದು ದ್ವೇಷ ಮತ್ತು ಅಸಹಿಷ್ಣುತೆಯನ್ನು ಪ್ರಚೋದಿಸುವಂಥದ್ದು ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ. ಹಿಂಸೆಯನ್ನು ಪ್ರಚೋದಿಸುವ ಉದ್ದೇಶದ ಹೇಳಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದನ್ನೂ ಪಕ್ಷ ಪ್ರಶ್ನಿಸಿದೆ.