×
Ad

Uttar Pradesh | ಪಾಶ್ಚಿಮಾತ್ಯ ಪ್ರಭಾವ ತಡೆಗೆ ಖಾಪ್ ಪಂಚಾಯತ್ ಕ್ರಮ; ಮೊಬೈಲ್ ನಿಷೇಧ, ಮದುವೆಗಳಿಗೆ ಹೊಸ ಮಾರ್ಗಸೂಚಿ

Update: 2025-12-28 08:33 IST

PC: x.com/timesofindia

ಲಕ್ನೋ: ಪಾಶ್ಚಿಮಾತ್ಯ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಮತ್ತು ಸಾಂಪ್ರದಾಯಿಕ ಮೌಲ್ಯಗಳು ನಶಿಸುವುದನ್ನು ತಡೆಯಲು ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಖಾಪ್ ಪಂಚಾಯತ್, ಹದಿಯರೆಯದವರಿಗೆ ಮೊಬೈಲ್ ಫೋನ್ ಬಳಕೆ ನಿಷೇಧ, ಹುಡುಗರು ಮತ್ತು ಹುಡುಗಿಯರು ತುಂಡು ವಸ್ತ್ರ ಧರಿಸುವುದನ್ನು ತಡೆಯವುದು ಸೇರಿದಂತೆ ಸರಣಿ ಸಾಮಾಜಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಥಾಂಬಾ ದೇಶ್ ಖಾಪ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾಜಿಕ ಶಿಸ್ತು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಗ್ರಾಮಗಳ ನಡುವೆ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಸಮರ್ಥಿಸಿಕೊಳ್ಳಲಾಗಿದೆ. ವಿವಾಹ ಸಮಾರಂಭಗಳಿಗೂ ಹಲವು ನಿರ್ಬಂಧಗಳನ್ನು ಹೇರಲಾಗಿದ್ದು, ಅತಿಥಿಗಳ ಪಟ್ಟಿಯ ಮೇಲೆ ನಿರ್ಬಂಧ ವಿಧಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ತಡೆಯುವ ಉದ್ದೇಶಗಳಿಂದ ಈ ಕ್ರಮ ಕೈಗೊಂಡಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಖಾಪ್ ಪಂಚಾಯತ್ ನಿರ್ಣಯದಂತೆ ಹದಿಹರೆಯದವರು, ಅದರಲ್ಲೂ ಮುಖ್ಯವಾಗಿ 18-20 ವರ್ಷ ವಯಸ್ಸಿನ ಯುವಕ ಯುವತಿಯರು ಸ್ಮಾರ್ಟ್ ಫೋನ್‌ಗಳನ್ನು ಬಳಸುವಂತಿಲ್ಲ. ಅನಿವಾರ್ಯವಾಗಿ ಫೋನ್‌ಗಳನ್ನು ಬಳಸುವುದಾದಲ್ಲಿ ಮನೆಯಲ್ಲಿ ಇಟ್ಟುಕೊಳ್ಳಬಹುದೇ ವಿನಃ ನೇರವಾಗಿ ಮಕ್ಕಳಿಗೆ ನೀಡುವಂತಿಲ್ಲ. ಅಂತೆಯೇ ವಿವಾಹ ಸಮಾರಂಭಗಳನ್ನು ಗ್ರಾಮಗಳಲ್ಲಿ ಅಥವಾ ಮನೆಗಳಲ್ಲೇ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಮದುವೆ ಹಾಲ್ ಗಳಲ್ಲಿ ಏರ್ಪಡಿಸಿದಲ್ಲಿ ದೊಡ್ಡ ವಾಣಿಜ್ಯ ಸಮಾರಂಭಗಳು ಸಂಬಂಧಗಳನ್ನು ಹಾಳುಮಾಡುತ್ತವೆ ಹಾಗೂ ಹಣಕಾಸು ಸ್ಥಿತಿಯನ್ನು ಹದಗೆಡಿಸುತ್ತವೆ. ಅಂತೆಯೇ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುವ ಬದಲು ವಾಟ್ಸಪ್ ಮೂಲಕವಷ್ಟೇ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಇದು ಸಮಾಜದ ಸಂಘಟಿತ ಇಂಗಿತವಾಗಿದೆ ಎಂದು ಥಾಂಬಾ ದೇಶ್ ಖಾಪ್ ಚೌಧರಿ ಬೃಜ್‌ಪಾಲ್ ಸಿಂಗ್ ಹೇಳಿದ್ದಾರೆ. ಈ ಸಮಾಜ ಕೈಗೊಂಡಿರುವ ನಿರ್ಧಾರ ಅಂತಿಮ. ರಾಜಸ್ಥಾನದಲ್ಲಿ ಇಂಥದ್ದೇ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ನಾವು ಕೂಡಾ ಹದಿಹರೆಯದವರಿಗೆ ಸ್ಮಾರ್ಟ್ ಫೋನ್‌ ಹಾಗೂ ತುಂಡುಡುಗೆಯನ್ನು ನಿಷೇಧಿಸಲು ಉದ್ದೇಶಿಸಿದ್ದೇವೆ. ಶಿಕ್ಷಣ ಮತ್ತು ಸಾಮಾಜಿಕ ಮಾರ್ಗದರ್ಶನ ಪಡೆಯಲು ಮಕ್ಕಳು ಕುಟುಂಬದ ಹಿರಿಯರ ಜತೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಅವರು ವಿಶ್ಲೇಷಿಸಿದ್ದಾರೆ. ದಗಧ್ ಖಾಪ್ ಚೌಧರಿ ಓಂಪಾಲ್ ಸಿಂಗ್ ಕೂಡಾ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News