×
Ad

ದಟ್ಟ ಮಂಜು; ಹಲವು ವಿಮಾನ ರದ್ದುಪಡಿಸಿದ ಇಂಡಿಗೊ

Update: 2025-12-28 07:30 IST

Photo Credit : PTI 

ಹೊಸದಿಲ್ಲಿ: ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಹಾಗೂ ದಟ್ಟ ಮಂಜು ಮುಸುಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆ ರವಿವಾರ 13 ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ. ಚಂಡೀಗಢ, ಮುಂಬೈ, ಅಹ್ಮದಾಬಾದ್, ಹೈದ್ರಾಬಾದ್, ಬೆಂಗಳೂರು, ಅಮೃತಸರ, ದೆಹಲಿ, ಗಯಾ, ಕೊಲ್ಕತ್ತಾ, ಚೆನ್ನೈ, ಜೈಪುರ ಮತ್ತು ಪುಣೆ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿವೆ ಎಂದು ಪ್ರಕಟಿಸಿದೆ.

ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ನೀಡಿ ಇಂಡಿಗೊ ಶನಿವಾರ 57 ವಿಮಾನಗಳನ್ನು ರದ್ದುಪಡಿಸಿತ್ತು. ಪೈಲಟ್ ಗಳ ಕೆಲಸದ ಅವಧಿ ಮತ್ತು ವಿಶ್ರಾಂತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ, ಹಲವು ವಿಮಾನಗಳ ಸೇವೆಯನ್ನು ರದ್ದುಪಡಿಸಿದ್ದ ಇಂಡಿಗೊ ಇದೀಗ ಪ್ರತಿಕೂಲ ಹವಾಮಾನದ ಕಾರಣ ನೀಡಿ ಸೇವೆ ರದ್ದುಪಡಿಸಿದೆ.

ಏತನ್ಮಧ್ಯೆ ಹಲವು ವಿಮಾನ ನಿಲ್ದಾಣಗಳಲ್ಲಿ ದಟ್ಟ ಮಂಜು ಮತ್ತು ದೃಶ್ಯತೆಯ ಸಮಸ್ಯೆ ಕಾರಣದಿಂದ ವಿಮಾನ ಪ್ರಯಾಣಿಕರಿಗೆ ಹಲವು ನಿರ್ದೇಶನಗಳನ್ನು ಏರ್‌ಇಂಡಿಯಾ ಕೂಡಾ ಬಿಡುಗಡೆ ಮಾಡಿದೆ. ಪ್ರತಿಕೂಲ ಪರಿಸ್ಥಿತಿಯಿಂದಾಗಿ ಚಂಡೀಗಢ, ಅಮೃತಸರ ಮತ್ತು ವಾರಣಾಸಿಯಲ್ಲಿ ರವಿವಾರ ಮುಂಜಾನೆ ವಿಮಾನ ಸಂಚಾರ ವೇಳಾಪಟ್ಟಿ ವ್ಯತ್ಯಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಅನಿವಾರ್ಯ ವಿಳಂಬ ಮತ್ತು ವಿಮಾನ ಪಥ ಬದಲಿಸುವ ಸಂದರ್ಭದಲ್ಲಿ ಪ್ರಯಾಣಿಕರು ಸಹಕರಿಸಬೇಕು ಮತ್ತು ನಿಮ್ಮ ನೆರವಿಗೆ ಸಿಬ್ಬಂದಿ ಸದಾ ಸಿದ್ಧರಿದ್ದಾರೆ ಎಂದು ಏರ್‌ಇಂಡಿಯಾ ಹೇಳಿಕೆ ನೀಡಿದೆ. "ನಾಳೆ ನಮ್ಮ ವಿಮಾನದಲ್ಲಿ ಪ್ರಯಾಣಿಸುವುದಾದಲ್ಲಿ, ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಹಾಗೂ ನಿಮ್ಮ ಪ್ರಯಾಣಕ್ಕೆ ಹೆಚ್ಚುವರಿ ಸಮಯಾವಕಾಶ ಹೊಂದಿಸಿಕೊಳ್ಳಬೇಕು" ಎಂದು ಎಕ್ಸ್  ಪೋಸ್ಟ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News