Pune | ಸ್ಥಳೀಯ ಸಂಸ್ಥೆ ಚುನಾವಣೆ: ಪೊಲೀಸ್ ಬೆಂಗಾವಲಿನಲ್ಲಿ ಮುಖ ಮುಚ್ಚಿಕೊಂಡು ಬಂದು ನಾಮಪತ್ರ ಸಲ್ಲಿಸಿದ ಗ್ಯಾಂಗ್‌ಸ್ಟರ್
PC: x.com/ndtv
ಪುಣೆ: ಕುಖ್ಯಾತ ರೌಡಿ ಬಂಡು ಅಂಬೇಡ್ಕರ್ ಶನಿವಾರ ಪೊಲೀಸ್ ರಕ್ಷಣೆಯಲ್ಲಿ ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾನೆ. ಮೊಮ್ಮಗನ ಹತ್ಯೆ ಆರೋಪದ ಸಂಬಂಧ ಜೈಲಿನಲ್ಲಿರುವ ರೌಡಿಯನ್ನು ಶನಿವಾರ ಸರ್ಕಾರಿ ಕಚೇರಿಗೆ ಪೊಲೀಸ್ ಬಂದೋಬಸ್ತಿನಲ್ಲಿ ಕರೆತಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಯಿತು.
ಇಲ್ಲಿನ ವಿಶೇಷ ಎಂಕೋಕಾ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದ ಮರುದಿನ ಬಂಡು ಅಂಬೇಡ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾನೆ. ಮೊಮ್ಮಗ ಆಯುಷ್ ಕೊಮ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಅತ್ತಿಗೆ ಲಕ್ಷ್ಮಿ ಅಂಬೇಡ್ಕರ್ ಮತ್ತು ಸೊಸೆ ಸೊನಾಲಿ ಅಂಬೇಡ್ಕರ್ ಕೂಡಾ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಕೋರ್ಟ್ನ ಅನುಮತಿಯಂತೆ ಅವರು ಕೂಡಾ ನಾಮಪತ್ರ ಸಲ್ಲಿಸಿದರು. ಪುಣೆ ಮಹಾನಗರ ಪಾಲಿಕೆ ಮತ್ತು ರಾಜ್ಯದ 28 ಸ್ಥಳೀಯ ಸಂಸ್ಥೆಗಳಿಗೆ ಜನವರಿ 15ರಂದು ಚುನಾವಣೆ ನಡೆಯಲಿದೆ.
ಬಂಡು ಅಂಬೇಡ್ಕರ್ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗಿತ್ತು ಹಾಗೂ ಹಗ್ಗದಿಂದ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಯೆರವಾಡ ಕೇಂದ್ರ ಕಾರಾಗೃಹದಿಂದ ಭವಾನಿಪೇಟೆಯ ಸರ್ಕಾರಿ ಕಚೇರಿಗೆ ಕರೆತಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಯಿತು. ನಾಮಪತ್ರ ಸಲ್ಲಿಕೆಯ ಕೇಂದ್ರದೊಳಗೆ ಕೂಡಾ ಪೊಲೀಸ್ ಬೆಂಗಾವಲು ವ್ಯವಸ್ಥೆಗೊಳಿಸಲಾಗಿತ್ತು ಹಾಗೂ ನಾಮಪತ್ರ ಸಲ್ಲಿಸುವ ವೇಳೆ ಬಂಡು ಸ್ವತಃ ತನ್ನನ್ನು ಬೆಂಬಲಿಸುವ ಘೋಷಣೆ ಕೂಗಿದ ಎನ್ನಲಾಗಿದೆ.
ಬಂಡು ಹಾಗೂ ಆತನ ಸಂಬಂಧಿಕರು ಪಕ್ಷೇತರ ಅಭ್ಯರ್ಥಿಗಳಾಗಿ ಭವಾನಿಪೇಟೆ ವಾರ್ಡ್ನಿಂದ ಪುಣೆ ಮಹಾನಗರ ಪಾಲಿಕೆಗೆ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮಿತುನ್ ಚವ್ಹಾಣ್ ಹೇಳಿದ್ದಾರೆ.