Uttarakhand| ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಗುಂಡಿನ ದಾಳಿ: ಗಂಭೀರವಾಗಿ ಗಾಯಗೊಂಡಿದ್ದ ಗ್ಯಾಂಗ್ ಸ್ಟರ್ ವಿನಯ್ ತ್ಯಾಗಿ ಮೃತ್ಯು
Photo| NDTV
ಹರಿದ್ವಾರ: ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನಡೆದಿದ್ದ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ಯಾಂಗ್ ಸ್ಟರ್ ವಿನಯ್ ತ್ಯಾಗಿ, ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಯ್ ತ್ಯಾಗಿ ಹತ್ಯೆಗೆ ಪೊಲೀಸರ ಪಿತೂರಿ ಕಾರಣ ಎಂದು ಆರೋಪಿಸಿರುವ ಕುಟುಂಬದ ಸದಸ್ಯರು, ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬುಧವಾರ ರೂರ್ಕೀ ಜೈಲಿನಿಂದ ಲಕ್ಸರ್ ನ್ಯಾಯಾಲಯಕ್ಕೆ ವಿನಯ್ ತ್ಯಾಗಿಯನ್ನು ಕರೆದೊಯ್ಯುವಾಗ, ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಲಕ್ಸರ್ ಫ್ಲೈಓವರ್ ಬಳಿ ಆತನಿದ್ದ ಪೊಲೀಸ್ ವಾಹನದ ಮೇಲೆ ಮತ್ತು ವಿನಯ್ ತ್ಯಾಗಿ ಮೇಲೆ ಗುಂಡಿಕ್ಕಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕುಖ್ಯಾತ ಸುನೀಲ್ ರಾಠಿ ಗ್ಯಾಂಗಿಗೆ ಸೇರಿದ ವಿನಯ್ ತ್ಯಾಗಿ ಮೇಲೆ ದುಷ್ಕರ್ಮಿಗಳು ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ರಿಷಿಕೇಶ್ ಏಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.