ಸರಕಾರದಿಂದ ರಿಯಾಯಿತಿ ದರದಲ್ಲಿ ಪಡೆದ ಭೂಮಿಯನ್ನು 'ರಿಯಲ್ ಎಸ್ಟೇಟ್' ಕಂಪೆನಿಗೆ 250 ಕೋಟಿ ರೂ.ಗೆ ಮಾರಾಟ ಮಾಡಿದ Infosys!
►ವ್ಯವಹಾರ ಕುದುರಿಸಿಕೊಂಡಿದ್ದನ್ನು ಸ್ಟಾಕ್ ಎಕ್ಸ್‌ಚೇಂಜ್ ಗೆ ತಿಳಿಸಿದ ಕಂಪೆನಿ ►ವ್ಯವಹಾರದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಸಂಸದ ಕಾರ್ತಿ ಚಿದಂಬರಂ
Photo| PTI/Bloomberg
ಬೆಂಗಳೂರು: ಬೆಂಗಳೂರು ಸಮೀಪದ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಇರುವ 53.5 ಎಕರೆ ಭೂಮಿಯನ್ನು ಐಟಿ ಕಂಪೆನಿ ಇನ್ಫೋಸಿಸ್, ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರಗೆ 250 ಕೋಟಿ ರೂ.ಗೆ ಮಾರಾಟ ಮಾಡಿದೆ ಎನ್ನಲಾದ ವ್ಯವಹಾರದ ಕಾನೂನುಬದ್ಧತೆಯನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪ್ರಶ್ನಿಸಿದ್ದಾರೆ.
Times of India ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ, ಈ ಭೂಮಿಯನ್ನು ಮೂಲತಃ ನಿರ್ದಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. “ನಿರ್ದಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ನೀಡಿದ ಭೂಮಿಯನ್ನು ಆ ಉದ್ದೇಶಕ್ಕೆ ಬಳಸದೇ ಇದ್ದರೆ, ಅದನ್ನು ನಂತರ ವಾಣಿಜ್ಯ ದರಕ್ಕೆ ಮಾರಾಟ ಮಾಡುವ ಹಕ್ಕು ಕಂಪೆನಿಗೆ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಭೂಮಿಯನ್ನೂ, ಅದರಿಂದ ಬಂದ ಆದಾಯವನ್ನೂ ಕರ್ನಾಟಕ ಸರಕಾರಕ್ಕೆ ಹಿಂತಿರುಗಿಸಬೇಕು” ಎಂದು ಹೇಳಿದ್ದಾರೆ. ಕರ್ನಾಟಕ ಅಭಿವೃದ್ಧಿ ಸೂಚ್ಯಂಕ ಎಂಬ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟವಾದ ಪೋಸ್ಟ್ ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.
ವರದಿಗಳ ಪ್ರಕಾರ, ಬೆಂಗಳೂರು–ತಮಿಳುನಾಡು ಗಡಿಗೆ ಸಮೀಪದ ಅತ್ತಿಬೆಲೆ ಹೋಬಳಿಯಲ್ಲಿರುವ ಈ ಪ್ರದೇಶದವು ಪುರವಂಕರ ಸಂಸ್ಥೆಯ ವಿಸ್ತರಣಾ ಯೋಜನೆಯ ಭಾಗವಾಗಿದೆ. ಸುಮಾರು 250 ಕೋಟಿ ರೂ. ಮೌಲ್ಯದ ಈ ಒಪ್ಪಂದದಿಂದ ಬೆಂಗಳೂರು ಪ್ರದೇಶದಲ್ಲಿನ ಕಂಪೆನಿಯ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಹೇಳಲಾಗಿದೆ.
ಸ್ಟಾಕ್ ಎಕ್ಸ್‌ಚೇಂಜ್ ಗೆ ಸಲ್ಲಿಸಿದ ಮಾಹಿತಿಯಲ್ಲಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಶಿಷ್ ಪುರವಂಕರ ಆಯಕಟ್ಟಿನ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಬಹುದಾದ ಗುಣಮಟ್ಟದ ಭೂಮಿಯನ್ನು ಹಂತ ಹಂತವಾಗಿ ಸೇರಿಸಿಕೊಳ್ಳುವುದು ಸಂಸ್ಥೆಯ ದೀರ್ಘಕಾಲೀನ ಯೋಜನೆ ಎಂದು ಸ್ಪಷ್ಟಪಡಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ, ಉತ್ತಮ ಸಂಪರ್ಕ ಮತ್ತು ಬಳಕೆದಾರರಿಂದ ನಿರಂತರ ಬೇಡಿಕೆ ಇರುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ವಿಸ್ತರಣೆ ನಡೆಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಅತ್ತಿಬೆಲೆ ಹೋಬಳಿಯ ಈ ಭೂಭಾಗದಲ್ಲಿ ಸುಮಾರು 6.4 ಮಿಲಿಯನ್ ಚದರ ಅಡಿ ಮಾರಾಟಯೋಗ್ಯ ಪ್ರದೇಶ ಅಭಿವೃದ್ಧಿಪಡಿಸಬಹುದು ಎಂದು ಅಂದಾಜಿಸಲಾಗಿದೆ. ಇದರ ಒಟ್ಟು ಅಭಿವೃದ್ಧಿ ಮೌಲ್ಯ (ಜಿಡಿವಿ) 4,800 ಕೋಟಿ ರೂ. ಮೀರಲಿದೆ ಎಂದು ವರದಿ ಹೇಳಿದೆ.
ಈ ಸ್ವಾಧೀನಕ್ಕೆ ಮುನ್ನವೇ FY26ರ ಮೊದಲಾರ್ಧದಲ್ಲಿ ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ 6.3 ಮಿಲಿಯನ್ ಚದರ ಅಡಿ ಅಭಿವೃದ್ಧಿಪಡಿಸಬಹುದಾದ ಪ್ರದೇಶವನ್ನು ಪುರವಂಕರವು ವಿಸ್ತರಿಸಿಕೊಂಡಿದ್ದು, ಅದರ ಅಂದಾಜು ಜಿಡಿವಿ ಸುಮಾರು 9,100 ಕೋಟಿ ರೂ. ಆಗಿದೆ ಎಂದು ಸಂಸ್ಥೆಯ ಸಿಇಒ (ದಕ್ಷಿಣ) ಮಲ್ಲಣ್ಣ ಸಲಸು ತಿಳಿಸಿದ್ದಾರೆ. ಇನ್ಫೋಸಿಸ್ ನಿಂದ ಖರೀದಿಸಿರುವ ಭೂಮಿಯ ಸೇರ್ಪಡೆಯೊಂದಿಗೆ, ಈ ವರ್ಷಕ್ಕೆ ಕಂಪೆನಿಯ ಒಟ್ಟು ಅಭಿವೃದ್ಧಿಪಡಿಸಬಹುದಾದ ಭೂ ಪ್ರದೇಶವು ಸುಮಾರು 12.7 ಮಿಲಿಯನ್ ಚದರ ಅಡಿಗೆ ಏರಿದ್ದು, ಒಟ್ಟು ಸಂಭಾವ್ಯ ಜಿಡಿವಿ ಸುಮಾರು 13,900 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿ ವಿವರಿಸಿದೆ.
ಕಾರ್ತಿ ಚಿದಂಬರಂ ಅವರ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಇನ್ಫೋಸಿಸ್ ಅನ್ನು ಸಂಪರ್ಕಿಸಲಾಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.