Aravali Row| ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಅರಾವಳಿ ಬೆಟ್ಟಗಳ ಕುರಿತ ನ.20ರ ಆದೇಶದ ವಿರುದ್ಧ ಪರಿಸರವಾದಿಗಳು ಹಾಗೂ ನಾಗರಿಕ ವಲಯದಿಂದ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತ(ಸುಮೊಟೊ)ವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ.
ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ, ‘ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳು ಹಾಗೂ ಸಂಬಂಧಿತ ವ್ಯಾಖ್ಯಾನ’ ಕುರಿತ ಸ್ವಯಂ ಪ್ರೇರಿತ ಸಿವಿಲ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರೊಂದಿಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನವೆಂಬರ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ, ಅರಾವಳಿ ಜಿಲ್ಲೆಗಳಲ್ಲಿ ಅಳೆಯುವಾಗ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರ ಹೊಂದಿರುವ ಯಾವುದೇ ಭೂರೂಪವನ್ನು ‘ಅರಾವಳಿ ಬೆಟ್ಟ’ ಎಂದು ಪರಿಗಣಿಸಬೇಕು ಎಂಬ ತಜ್ಞರ ಸಮಿತಿಯ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು. ಪರಸ್ಪರ 500 ಮೀಟರ್ ಒಳಗೆ ಇರುವ ಎರಡು ಅಥವಾ ಹೆಚ್ಚಿನ ಬೆಟ್ಟಗಳನ್ನು ‘ಅರಾವಳಿ ಶ್ರೇಣಿ’ ಎಂದು ವ್ಯಾಖ್ಯಾನಿಸಲಾಗಿದೆ.
ಈ ವ್ಯಾಖ್ಯಾನವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ, ಎನ್‌ಸಿಟಿ ದಿಲ್ಲಿ, ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳ ಅರಣ್ಯ ಇಲಾಖೆ ಕಾರ್ಯದರ್ಶಿಗಳು, ಭಾರತದ ಅರಣ್ಯ ಸಮೀಕ್ಷೆ, ಕೇಂದ್ರಿಯ ಅಧಿಕಾರ ಸಮಿತಿ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಸಚಿವಾಲಯದ ಜಂಟಿ ಕಾರ್ಯದರ್ಶಿಯ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯು ನೀಡಿತ್ತು.
ಆದರೆ ಈ ತೀರ್ಪು ಪರಿಸರ ಸಂರಕ್ಷಣೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 100 ಮೀಟರ್ ಗಿಂತ ಕಡಿಮೆ ಎತ್ತರದ ಬೆಟ್ಟಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡುವುದರಿಂದ ವ್ಯಾಪಕ ಗಣಿಗಾರಿಕೆ ನಡೆಯುವ ಅಪಾಯವಿದ್ದು, ಇದರ ಪರಿಣಾಮವಾಗಿ ಅರಾವಳಿ ಪ್ರದೇಶದ ಪರಿಸರ ಸಮತೋಲನಕ್ಕೆ ಗಂಭೀರ ಹಾನಿಯಾಗಬಹುದು ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೊಂಡಿರುವುದು ಮಹತ್ವ ಪಡೆದುಕೊಂಡಿದೆ.