637 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ | ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾದಲ್ಲಿ ಈಡಿ ದಾಳಿ
ಈಡಿ | PC : @dir_ed
ಹೊಸದಿಲ್ಲಿ, ಸೆ. 2: 637 ಕೋ.ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಚೆನ್ನೈ ಮೂಲದ ಕಂಪೆನಿಯನ್ನು ಗುರಿಯಾಗಿರಿಸಿ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈಡಿ) ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ಗೋವಾದಲ್ಲಿ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಯಮಗಳ ಅಡಿಯಲ್ಲಿ ಅರವಿಂದ್ ರೆಮೆಡೀಸ್, ಅದರ ಪ್ರವರ್ತಕ ಅರವಿಂದ್ ಬಿ. ಶಾ ಹಾಗೂ ಇತರರ ವಿರುದ್ಧ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈ, ಕಾಂಚಿಪುರಂ, ಕೊಲ್ಕತ್ತಾ ಹಾಗೂ ಗೋವಾದ ಕೆಲವು ಸ್ಥಳಗಳಲ್ಲಿ ಈ ದಾಳಿ ನಡೆದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನೇತೃತ್ವದ ಸಾಲದಾತರ ಒಕ್ಕೂಟಕ್ಕೆ 637 ಕೋ.ರೂ. ವಂಚಿಸಿರುವುದಕ್ಕಾಗಿ ರೆಮೆಡಿಸ್ ಹಾಗೂ ಅದರ ಪ್ರವರ್ತಕರ ವಿರುದ್ಧ ಸಿಬಿಐ 2016 ಅಕ್ಟೋಬರ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು. ಈ ಎಫ್‌ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ 2021 ಜುಲೈಯಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತ್ತು.