2022-23ರಲ್ಲಿ ಬ್ಯಾಂಕ್‌ಗಳಿಂದ ರೂ. 2.09 ಲಕ್ಷ ಕೋಟಿ ಮೌಲ್ಯದ ಸಾಲ ರೈಟ್-ಆಫ್: ಆರ್‌ಬಿಐ
ಹೊಸದಿಲ್ಲಿ: ಮಾರ್ಚ್ 2023ಗೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು ರೂ 2.09 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಅನುತ್ಪಾದಕ ಸಾಲಗಳನ್ನು ರೈಟ್ ಆಫ್ ಮಾಡಿವೆ. ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ಗಳು ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ ಸಾಲದ ಪ್ರಮಾಣ ರೂ 10.57 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಆರ್ಟಿಐ ಉತ್ತರವೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಈ ರೈಟ್ ಆಫ್‌ನಿಂದಾಗಿ ಬ್ಯಾಂಕ್‌ಗಳಿಗೆ ತಮ್ಮ ಒಟ್ಟು ಎನ್‌ಪಿಎಗಳನ್ನು ಅಥವಾ ಸಾಲಗಾರರು ಮರುಪಾವತಿಸಲು ವಿಫಲವಾದ ಸಾಲವನ್ನು ಹತ್ತು ವರ್ಷಗಳಲ್ಲಿಯೇ ಕಡಿಮೆ ಪ್ರಮಾಣಕ್ಕೆ (ಶೇ3.9) ಇಳಿಸಲು ಸಾಧ್ಯವಾಗಿದೆ. ಒಟ್ಟು ಎನ್‌ಪಿಎಗಳು ಆರ್ಥಿಕ ವರ್ಷ 2018ರಲ್ಲಿ ರೂ 10.21 ಲಕ್ಷ ಕೋಟಿ ಇದ್ದರೆ 2023ರಲ್ಲಿ ರೂ 5.55 ಲಕ್ಷ ಕೋಟಿ ಆಗಿದೆ.
ಆರ್ಥಿಕ ವರ್ಷ 2012-13ರಿಂದ ಬ್ಯಾಂಕ್‌ಗಳು ಬರೋಬ್ಬರಿ ರೂ15,31,453 ಕೋಟಿ ಸಾಲವನ್ನು ರೈಟ್ ಆಫ್ ಮಾಡಿವೆ. ಆದರೆ ಹೀಗೆ ರೈಟ್ ಆಫ್ ಮಾಡಿದ ಸಾಲಗಳು ಮರುಪಾವತಿಯಾಗದ ಸಾಲಗಳು ಎಂದು ಬ್ಯಾಂಕ್‌ಗಳ ಲೆಕ್ಕಪುಸ್ತಕಗಳಲ್ಲಿ ಉಳಿಯಲಿವೆ.
ಕಳೆದ ಮೂರು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ಸಾಲದ ಪ್ರಮಾಣ ರೂ 586,891 ಕೋಟಿ ಆಗಿದ್ದರೆ ಆವುಗಳಲ್ಲಿ ಕೇವಲ ರೂ 1,09,186 ಕೋಟಿ (ಶೇ 18.60) ಮರುಪಾವತಿಯಾಗಿದೆ.
ಸಾಲ ರೈಟ್ ಆಫ್ 2023 ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ರೂ. 2,09,144 ಕೋಟಿಗೆ ಏರಿಕೆಯಾಗಿದ್ದರೆ ಒಂದು ವರ್ಷದ ಹಿಂದೆ, ಮಾರ್ಚ್ 2022ರಲ್ಲಿ ಈ ಪ್ರಮಾಣ ರೂ. 1,74,966 ಕೋಟಿ ಆಗಿದ್ದರೆ ಮಾರ್ಚ್ 2021 ರಲ್ಲಿ ರೂ 2,02,781 ಕೋಟಿ ಆಗಿತ್ತು.