×
Ad

ʼಏರ್ ಇಂಡಿಯಾʼ ಕಾಲೋನಿಯಲ್ಲಿ ಬೆಳೆದು ಕೋ ಪೈಲೆಟ್ ಹುದ್ದೆಗೇರಿದ್ದ ಮಂಗಳೂರು ಮೂಲದ ಕ್ಲೈವ್ ಕುಂದರ್

Update: 2025-06-13 19:41 IST

ಮುಂಬೈ: ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನದ ಪತನದಲ್ಲಿ ಮೃತಪಟ್ಟ 12 ಸಿಬ್ಬಂದಿಗಳಲ್ಲಿ ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದ ಪೈಲಟ್, ಮುಂಬೈನ ಏರ್ ಇಂಡಿಯಾ ಕಾಲೋನಿಯಲ್ಲಿ ಬೆಳೆದು ಏರ್ ಇಂಡಿಯಾ ವಿಮಾನದ ಕೋ ಪೈಲೆಟ್ ಆಗಿದ್ದ ಕೋ ಪೈಲೆಟ್, 11 ವರ್ಷಗಳಿಗೂ ಹೆಚ್ಚಿನ ಅನುಭವಿ ಫ್ಲೈಟ್ ಅಟೆಂಡೆಂಟ್, ಇತ್ತೀಚಿಗಷ್ಟೇ ಏರ್ ಇಂಡಿಯಾಕ್ಕೆ ಸೇರಿದ ಇಬ್ಬರು ಮತ್ತು ತನ್ನ ಗ್ರಾಮದ ಹಲವಾರು ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಪನ್ವೇಲ್‌ನ ಫ್ಲೈಟ್ ಅಟೆಂಡೆಂಟ್ ಸೇರಿದ್ದಾರೆ.

► ವಿಮಾನದ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್

 

ಸುಮೀತ್ ಸಭರ್ವಾಲ್ (PC : X \ @KumaarSaagar)

ಕ್ಯಾಪ್ಟನ್ ಸುಮೀತ್ ಸಭರ್ವಾಲ್(60) ಗುರುವಾರ ಅಹ್ಮದಾಬಾದ್‌ನಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅತ್ಯಂತ ಹಿರಿಯ ಸಿಬ್ಬಂದಿಯಾಗಿದ್ದರು. ದೀರ್ಘ ಕಾಲದಿಂದ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಭರ್ವಾಲ್ ತನ್ನ 90ರ ಹರೆಯದ ತಂದೆಯೊಂದಿಗೆ ಮುಂಬೈನ ಪೊವಾಯಿಯ ‘ಜಲವಾಯು ವಿಹಾರ’ದಲ್ಲಿ ವಾಸವಾಗಿದ್ದರು. ಅವರ ನೆರೆಹೊರೆಯವರ ಪ್ರಕಾರ ಸಭರ್ವಾಲ್ ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದರು. ತನ್ನ ವೃದ್ಧ ತಂದೆಯೊಂದಿಗೆ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಯೋಜಿಸಿದ್ದರು.

‘ಸಭರ್ವಾಲ್ ತುಂಬಾ ಗಂಭೀರ, ಶಿಸ್ತಿನ ವ್ಯಕ್ತಿಯಾಗಿದ್ದರು. ಅವರು ಆಗಾಗ್ಗೆ ಸಮವಸ್ತ್ರದಲ್ಲಿ ಮನೆಗೆ ಬಂದು ಹೋಗುತ್ತಿದ್ದನ್ನು ನಾವು ನೋಡುತ್ತಿದ್ದೆವು’ ಎಂದು ಜಲವಾಯು ವಿಹಾರದ ನಿವಾಸಿಯೋರ್ವರು ತಿಳಿಸಿದರು.

ಸಭರ್ವಾಲ್‌ರ ಹಿರಿಯ ಸೋದರಿ ದಿಲ್ಲಿಯಲ್ಲಿ ವಾಸವಾಗಿದ್ದು, ಅವರ ಇಬ್ಬರು ಪುತ್ರರೂ ಕಮರ್ಷಿಯಲ್ ಪೈಲಟ್‌ಗಳಾಗಿದ್ದಾರೆ. ಸಭರ್ವಾಲ್ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲ, ಅವರು ಹಲವಾರು ವರ್ಷಗಳಿಂದ ವಾಸವಿದ್ದ ಪೊವಾಯಿ ನಿವಾಸಿಗಳಿಗೂ ಆಘಾತವನ್ನುಂಟು ಮಾಡಿದೆ.

►ಮುಂಬೈನ ಏರ್ ಇಂಡಿಯಾ ಕಾಲೋನಿಯಿಂದ ಏರ್ ಇಂಡಿಯಾ ಕೋ ಪೈಲೆಟ್ ಹುದ್ದೇಗೇರಿದ ಮಂಗಳೂರು ಮೂಲದ ಕ್ಲೈವ್‌ ಕುಂದರ್

ಕ್ಲೈವ್‌ ಕುಂದರ್ | PC : X \ @talksleak

 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದ ಏರ್ ಇಂಡಿಯಾ ವಿಮಾನದ ಫಸ್ಟ್ ಆಫೀಸರ್ / ಕೋ ಪೈಲೆಟ್ ಕ್ಲೈವ್ ಕುಂದರ್ ಮೂಲತಃ ವಾಯುಯಾನ ಸಂಪರ್ಕವಿದ್ದ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ತಾಯಿ ರೇಖಾ ಅವರೂ ವಿಮಾನದ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು.

ಕ್ಲೈವ್‌ ಕುಂದರ್ ಅವರು ಮುಂಬೈ ಜುಹುವಿನ ಬಾಂಬೆ ಫ್ಲೈಯಿಂಗ್ ಕ್ಲಬ್‌ನಲ್ಲಿ ವಿಮಾನ ನಿರ್ವಹಣಾ ಕೋರ್ಸ್ ತರಬೇತಿ ಪಡೆದಿದ್ದರು. ಮೂಲತಃ ಮಂಗಳೂರಿನವರಾದ ಕ್ಲೈವ್ ಕುಂದರ್ ಬೋರಿವಾಲಿಗೆ ಸ್ಥಳಾಂತರಗೊಳ್ಳುವ ಮೊದಲು ಮುಂಬೈನ ಏರ್ ಇಂಡಿಯಾ ಕಾಲೋನಿಯಲ್ಲಿ ಬೆಳೆದರು.

ವಿಮಾನ ದುರಂತದಲ್ಲಿ ಕ್ಲೈವ್ ಕುಂದರ್ ಅವರು ಮೃತಪಟ್ಟಿರುವ ಬಗ್ಗೆ ಅವರ ಕುಟುಂಬಕ್ಕೆ ಸಂಪೂರ್ಣ ಮಾಹಿತಿ ಇಲ್ಲ. ಅವರ ಕುಟುಂಬವೂ ಭಾರತದಲ್ಲಿ ಇಲ್ಲ. "ನನ್ನ ತಂದೆ ಕ್ಲಿಫರ್ಡ್ ಮತ್ತು ತಾಯಿ ರೇಖಾ ಸಿಡ್ನಿಯಲ್ಲಿ ನನ್ನೊಂದಿಗಿದ್ದಾರೆ. ನನ್ನ ಸಹೋದರನ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ ಹೇಗಿದ್ದಾನೆಂದು ತಿಳಿದುಕೊಳ್ಳಲು ನಾವು ಶುಕ್ರವಾರ ಅಹಮದಾಬಾದ್‌ಗೆ ತೆರಳುತ್ತಿದ್ದೇವೆ" ಎಂದು ಕ್ವೈವ್ ಕುಂದರ್ ಅವರ ಸಹೋದರಿ ಕ್ಲೈನ್ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

► ದೀಪಕ್ ಪಾಠಕ್, ವಿಮಾನದ ಸಿಬ್ಬಂದಿ

ದೀಪಕ್ ಪಾಠಕ್ | PC :  FACEBOOK \ Deepak Pathak (Deepzz)

 11 ವರ್ಷಗಳಿಗೂ ಹೆಚ್ಚಿನ ಅನುಭವಿ, ಬದ್ಲಾಪುರ ಮೂಲದ ದೀಪಕ ಪಾಠಕ್ ಯಾವುದೇ ಹಾರಾಟಕ್ಕೂ ಮುನ್ನ ಮನೆಗೆ ಕರೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ ಮತ್ತು ಗುರುವಾರವೂ ಕರೆಯನ್ನು ಮಾಡಿದ್ದರು. ಆದರೆ ಅದು ಅವರ ಕೊನೆಯ ಕರೆಯಾಗಲಿದೆ ಎಂದು ಅವರ ಕುಟುಂಬವು ಊಹಿಸಿಯೂ ಇರಲಿಲ್ಲ.

ವಿಮಾನ ಪತನದ ಬಳಿಕ ಆರಂಭದಲ್ಲಿ ದೀಪಕ್ ಕುಟುಂಬವು ಅವರು ಬದುಕಿರಬಹುದು ಎಂಬ ಭರವಸೆಯಲ್ಲಿತ್ತು. ‘ಅವರ ಫೋನ್ ರಿಂಗ್ ಆಗುತ್ತಲೇ ಇತ್ತು. ಅಧಿಕಾರಿಗಳು ವಿಷಯವನ್ನು ದೃಢಪಡಿಸುವವರೆಗೆ ಅವರು ಸುರಕ್ಷಿತವಾಗಿರಬಹುದು ಎಂದು ನಾವು ಭಾವಿಸಿದ್ದೆವು’ ಕುಟುಂಬ ಸದಸ್ಯರೋರ್ವರು ತಿಳಿಸಿದರು. ದೀಪಕ್ ಕರ್ತವ್ಯಬದ್ಧ ಮತ್ತು ಶಿಸ್ತುಬದ್ಧ ವ್ಯಕ್ತಿಯಾಗಿದ್ದರು ಎಂದರು. ಈ ದುರಂತವು ಬದ್ಲಾಪುರ ನಿವಾಸಿಗಳಿಗೆ ತುಂಬ ನೋವನ್ನುಂಟು ಮಾಡಿದೆ.

► ಕ್ಯಾಬಿನ್ ಸಿಬ್ಬಂದಿ ಸೈನೀತಾ ಚಕ್ರವರ್ತಿ

ಸೈನೀತಾ ಚಕ್ರವರ್ತಿ | PC : X \ @JuhuBuzz

 ನೆರೆಹೊರೆಯವರು ಮತ್ತು ಸ್ನೇಹಿತರಿಂದ ಪ್ರೀತಿಯಿಂದ ‘ಪಿಂಕಿ’ ಎಂದು ಕರೆಯಲ್ಪಡುತ್ತಿದ್ದ ಸೈನೀತಾ ಚಕ್ರವರ್ತಿ(35) ಮುಂಬೈನ ಜುಹು ಕೋಳಿವಾಡಾ ನಿವಾಸಿಯಾಗಿದ್ದು, ಗೋ ಏರ್‌ನಲ್ಲಿ ಕೆಲಸ ಮಾಡಿದ ಬಳಿಕ ಇತ್ತೀಚಿಗೆ ಏರ್ ಇಂಡಿಯಾಕ್ಕೆ ಸೇರಿದ್ದರು.

‘ನಾವು ಜೊತೆಯಲ್ಲಿಯೇ ಬೆಳೆದಿದ್ದೆವು. ಸೈನೀತಾ ಮಾಣೆಕ್‌ ಜಿ ಕೂಪರ್ ಶಾಲೆಯಲ್ಲಿ ಮತ್ತು ನಂತರ ಮಿಥಿಭಾಯಿ ಕಾಲೇಜಿನಲ್ಲಿ ಓದಿದ್ದಳು. ಅವಳು ಸ್ಥಳಾಂತರಗೊಂಡ ಬಳಿಕವೂ ಆಗಾಗ್ಗೆ ನಾನು ಆಕೆಯನ್ನು ಸಮವಸ್ತ್ರದಲ್ಲಿ ನೋಡುತ್ತಿದ್ದೆ. ಸೈನೀತಾ ತಾನಿದ್ದ ಸ್ಥಾನಕ್ಕೇರಲು ತುಂಬ ಕಷ್ಟಪಟ್ಟಿದ್ದಳು. ಇದೊಂದು ಹೃದಯ ವಿದ್ರಾವಕ ಘಟನೆ’ ಎಂದು ಬಾಲ್ಯದ ಗೆಳತಿ ನಿಕಿ ಡಿ’ಸೋಜಾ ಹೇಳಿದರು.

►ಸಿಬ್ಬಂದಿ ಮೈಥಿಲಿ ಮೋರೆಶ್ವರ ಪಾಟೀಲ್

 ಮೈಥಿಲಿ ಮೋರೆಶ್ವರ ಪಾಟೀಲ್ | PC : X  \ @shobhana100

 ಮೈಥಿಲಿ ಮೋರೆಶ್ವರ ಪಾಟೀಲ್(24) ಪನ್ವೇಲ್‌ ನ ನ್ಹಾವಾ ಗ್ರಾಮದ ನಿವಾಸಿಯಾಗಿದ್ದರು. ನಿನ್ನೆ ವಿಮಾನ ಪತನದ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಆಕೆಯ ಮನೆಯ ಬಳಿ ಸೇರಿದ್ದರು. ಬಡಕುಟುಂಬದಿಂದ ಬಂದಿದ್ದರೂ ವಾಯುಯಾನ ಕ್ಷೇತ್ರದಲ್ಲಿ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಆಕೆ ಪಟ್ಟಿದ್ದ ಕಠಿಣ ಪರಿಶ್ರಮವನ್ನು ಹೆಚ್ಚಿನವರು ನೆನಪಿಸಿಕೊಂಡರು.

ಟಿಎಸ್ ರಹಮಾನ್ ವಿದ್ಯಾಲಯದಲ್ಲಿ 12ನೇ ತರಗತಿಯವರೆಗೆ ಓದಿದ್ದ ಮೈಥಿಲಿ ವಾಯುಯಾನ ಕೋರ್ಸ್‌ ಗೆ ಸೇರಿದ್ದರು. ಆರ್ಥಿಕ ಮುಗ್ಗಟ್ಟಿದ್ದರೂ ಕುಟುಂಬವು ಆಕೆಯನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು ಎಂದು ಗ್ರಾಮಸ್ಥರು ಹೇಳಿದರು.

ಏರ್ ಇಂಡಿಯಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಮೈಥಿಲಿ, ತನ್ನ ಗ್ರಾಮದ ಮಾತ್ರವಲ್ಲ,ಅದರಾಚೆಗೂ ಅಸಂಖ್ಯಾತ ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.

‘ಅವರು ನಮ್ಮ ಹೆಮ್ಮೆಯಾಗಿದ್ದರು. ಅವರ ಸಾಧನೆಗಳಿಂದ ನಾವು ತುಂಬ ಸಂತೋಷಗೊಂಡಿದ್ದೇವೆ. ವಿಮಾನ ಪತನದ ಸುದ್ದಿ ನಮ್ಮೆಲ್ಲರನ್ನೂ ನಿಶ್ಚೇಷ್ಟಿತಗೊಳಿಸಿದೆ’ ಎಂದು ನೆರೆಹೊರೆಯವರು ಹೇಳಿದರು. ಮೈಥಿಲಿ ತನ್ನ ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು.

► ರೋಶನಿ ರಾಜೇಂದ್ರ ಸೊಂಘರೆ, ಸಿಬ್ಬಂದಿ

ರೋಶನಿ ರಾಜೇಂದ್ರ ಸೊಂಘರೆ | PC :  indianexpress.com

 ಡೊಂಬಿವಲಿ ಈಸ್ಟ್‌ ನ ನ್ಯೂ ಉಮಿಯಾ ಕೃಪಾ ಸೊಸೈಟಿಯಲ್ಲಿ ಹೆತ್ತವರು ಮತ್ತು ಸೋದರನೊಂದಿಗೆ ವಾಸವಿದ್ದ ರೋಶನಿ(27) ಇತ್ತೀಚಿಗೆ ಏರ್ ಇಂಡಿಯಾಕ್ಕೆ ಸೇರಿದ್ದು, ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಗಗನಸಖಿಯಾಗುವುದು ಆಕೆಯ ಕನಸಾಗಿತ್ತು ಎಂದು ಸಂಬಂಧಿಯೋರ್ವರು ತಿಳಿಸಿದರು.

ರೋಶನಿ ಇನಸ್ಟಾಗ್ರಾಮ್‌ನಲ್ಲಿ ಗಣನೀಯ ಸಂಖ್ಯೆಯಲ್ಲಿ,54,000 ಫಾಲೋವರ್‌ಗಳನ್ನು ಹೊಂದಿದ್ದರು ಮತ್ತು ತನ್ನ ಜೀವನದ ತುಣುಕುಗಳನ್ನು ಅಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದರು.

ಸೌಜನ್ಯ: indianexpress.com, hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News