ಬಾಕ್ಸಿಂಗ್ ಫೆಡರೇಶನ್ ವ್ಯವಹಾರ ನೋಡಿಕೊಳ್ಳಲು ಸಮಿತಿ ; ಐಒಎ ನಿರ್ಧಾರವನ್ನು ಖಂಡಿಸಿದ ಬಿಎಫ್‌ಐ
Photo Credit | X/@BFI_official
ಹೊಸದಿಲ್ಲಿ: ದೇಶದಲ್ಲಿನ ಬಾಕ್ಸಿಂಗ್ ಕ್ರೀಡೆಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸುವ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನ ನಿರ್ಧಾರವನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ಬಲವಾಗಿ ಖಂಡಿಸಿದೆ ಹಾಗೂ ಈ ನಿರ್ಧಾರವು ‘‘ಕಾನೂನುಬಾಹಿರ’’ ಎಂದು ಹೇಳಿದೆ.
ಫೆಡರೇಶನ್‌ನ ‘‘ಆಡಳಿತಾತ್ಮಕ ಅಸ್ಥಿರತೆ’’ಯ ಹಿನ್ನೆಲೆಯಲ್ಲಿ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಯುವವರೆಗೆ ಬಾಕ್ಸಿಂಗ್ ಚಟುವಟಿಕೆಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದಕ್ಕಾಗಿ ತಾತ್ಕಾಲಿಕ ಸಮಿತಿಯೊಂದನ್ನು ರಚಿಸುವುದಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಸೋಮವಾರ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.
ಫೆಡರೇಶನ್‌ಗೆ ಫೆಬ್ರವರಿ 2ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ, ಚುನಾವಣೆ ನಡೆದಿಲ್ಲ.
‘‘ಭಾರತೀಯ ಬಾಕ್ಸಿಂಗ್ ಫೆಡರೇಶನ್‌ನ ಆಡಳಿತಾತ್ಮಕ ವ್ಯವಹಾರಗಳನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನಿಕಟವಾಗಿ ಗಮನಿಸುತ್ತಿದೆ. ನಿಯಮಾವಳಿಗಳಂತೆ, ಫೆಡರೇಶನ್‌ಗೆ 2025 ಫೆಬ್ರವರಿ 2ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ, ಸೂಚಿತ ವೇಳಾಪಟ್ಟಿಯ ಹೊರತಾಗಿಯೂ ಚುನಾವಣೆ ನಡೆದಿಲ್ಲ. ಹಾಗಾಗಿ, ಫೆಡರೇಶನ್‌ನ ಒಳಗೆ ಆಡಳಿತಾತ್ಮಕ ಅಸ್ಥಿರತೆ ಏರ್ಪಟ್ಟಿದೆ’’ ಎಂದು ಪತ್ರವೊಂದರಲ್ಲಿ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.
‘‘ಅದೂ ಅಲ್ಲದೆ, ಇತ್ತೀಚಿನ ತಿಂಗಳುಗಳಲ್ಲಿ ಹಲವು ಮಹತ್ವ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕೂಟಗಳಲ್ಲಿ ಭಾರತೀಯ ಬಾಕ್ಸರ್‌ಗಳು ಪಾಲ್ಗೊಳ್ಳದಿರುವ ಬಗ್ಗೆ ಬಾಕ್ಸರ್‌ಗಳು, ಕೋಚ್‌ಗಳು ಮತ್ತು ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಂದ ಹಲವು ದೂರುಗಳು ಬಂದಿವೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತೀಯ ಬಾಕ್ಸಿಂಗ್‌ನ ಬೆಳವಣಿಗೆ ಮತ್ತು ನಿರ್ವಹಣೆಗೆ ಮಾರಕವಾಗಿದೆ ಹಾಗೂ ಈ ನಿಟ್ಟಿನಲ್ಲಿ ತಕ್ಷಣ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ’’ ಎಂದು ಉಷಾ ಹೇಳಿದ್ದಾರೆ.
ಮಧುಕಾಂತ್ ಪಾಠಕ್ ನೇತೃತ್ವದ ಸಮಿತಿಯಲ್ಲಿ ರಾಜೇಶ್ ಭಂಡಾರಿ, ಡಿ.ಪಿ. ಭಟ್, ವೀರೇಂದ್ರ ಸಿಂಗ್ ಠಾಕೂರ್ ಮತ್ತು ಶಿವ ಥಾಪ ಸದಸ್ಯರಾಗಿದ್ದಾರೆ.
ಫೆಡರೇಶನ್‌ನ ವ್ಯವಹಾರಗಳನ್ನು ನೋಡಿಕೊಳ್ಳಲು ಸಮಿತಿಯನ್ನು ಸ್ಥಾಪಿಸುವ ಐಓಎ ನಿರ್ಧಾರವನ್ನು ಖಂಡಿಸಿ ಅದು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
‘‘ತನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ಸ್ಥಾಪಿಸುವ ನಿರ್ಧಾರವನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಬಲವಾಗಿ ಖಂಡಿಸುತ್ತದೆ. ಇದು ಕಾನೂನುಬಾಹಿರವಾಗಿದೆ ಮತ್ತು ರಾಷ್ಟ್ರೀಯ ಕೀಡಾ ಫೆಡರೇಶನ್‌ವೊಂದರ ಸ್ವಾಯತ್ತೆಯನ್ನು ಉಲ್ಲಂಘಿಸಲು ಮಾಡಿರುವ ಪ್ರಯತ್ನವಾಗಿದೆ. ಇದನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಬಿಎಫ್‌ಐ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ’’ ಎಂದು ತನ್ನ ಹೇಳಿಕೆಯಲ್ಲಿ ಅದು ತಿಳಿಸಿದೆ.