ಬಿಹಾರದ ಅರ್ಧದಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ADR
PC : adrindia.org
ಹೊಸದಿಲ್ಲಿ, ನ. 24: ಬಿಹಾರದ ಸುಮಾರು ಅರ್ಧದಷ್ಟು ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಬಹುತೇಕ ಎಲ್ಲರೂ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR)ನ ವರದಿ ಹೇಳಿದೆ.
24 ಸಚಿವರ ಅಫಿಡಾವಿಟ್ ಅನ್ನು ಪರಿಶೀಲಿಸಿರುವ ಈ ವರದಿ ಬಿಹಾರ್ ವಿಧಾನ ಸಭೆ-2025ರ ಸಚಿವರ ಕ್ರಿಮಿನಲ್ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿವರಗಳನ್ನು ವಿಶ್ಲೇಷಿಸಿದೆ.
24 ಸಚಿವರಲ್ಲಿ 11 ಮಂದಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. 9 ಮಂದಿ ಗಲಭೆ, ಸರಕಾರಿ ಸಿಬ್ಬಂದಿ ಮೇಲೆ ಹಲ್ಲೆ, ವಂಚನೆ, ನಕಲಿ, ಗಂಭೀರ ಗಾಯ, ಚುನಾವಣಾ ಅಕ್ರಮಗಳಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಎಲ್ಲಾ ಪಕ್ಷಗಳ ಸಚಿವರ ಮೇಲೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಬಿಜೆಪಿಯ 6 ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೆಡಿ(ಯು) ಇಬ್ಬರು ಸಚಿವರು ಕೂಡ ಇದೇ ರೀತಿಯ ಪ್ರಕರಣ ಎದುರಿಸುತ್ತಿದ್ದಾರೆ. ಎಲ್‌ಜೆಪಿ (ಆರ್‌ವಿ)ಯ ಇಬ್ಬರು ಸಚಿವರನ್ನು ದೂರುಗಳಲ್ಲಿ ಹೆಸರಿಸಲಾಗಿದೆ. ಎಚ್‌ಎಎಂ (ಎಸ್)ನ ಏಕೈಕ ಸಚಿವರು ಕೂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿವರೆಗೆ ಯಾರೂ ಶಿಕ್ಷೆಗೆ ಒಳಗಾಗಿಲ್ಲ.
ಸಚಿವ ಸಂಪುಟ ಆರ್ಥಿಕವಾಗಿ ಸಶಕ್ತವಾಗಿದೆ ಎಂಬುದನ್ನು ವರದಿ ತೋರಿಸಿದೆ. 24 ಸಚಿವರಲ್ಲಿ 21 ಮಂದಿ 1 ಕೋಟಿ ರೂ.ಗಿಂತ ಅಧಿಕ ಆಸ್ತಿ ಹೊಂದಿದ್ದಾರೆ. ಸಚಿವರ ಸರಾಸರಿ ಸಂಪತ್ತು 5.32 ಕೋ.ರೂ.ಗಿಂತ ಸ್ಪಲ್ಪ ಹೆಚ್ಚಿದೆ ಎಂದು ವರದಿ ಹೇಳಿದೆ.