ಬಿಹಾರ | ಬಟ್ಟೆ ವ್ಯಾಪಾರಿಯನ್ನು ಥಳಿಸಿ ಗುಂಪು ಹತ್ಯೆ
ಮೈಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ!
ಸಾಂದರ್ಭಿಕ ಚಿತ್ರ
ಪಾಟ್ನಾ,ಡಿ.14: ಬಿಹಾರದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿ ತೋರಿಸಿರುವ ಆಘಾತಕಾರಿ ಘಟನೆಯಲ್ಲಿ ಡಿ.5ರಂದು ನವಾದಾದ ರೋಹ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕ್ರೂರ ಗುಂಪು ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಳಂದಾ ಜಿಲ್ಲೆಯ ಬಟ್ಟೆ ವ್ಯಾಪಾರಿ ಮುಹಮ್ಮದ್ ಅತಹರ್ ಹುಸೇನ್ (40) ಡಿ.12ರಂದು ಮೃತಪಟ್ಟಿದ್ದಾರೆ.
ತನ್ನ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಹುಸೇನ್ ಕಳೆದ 20 ವರ್ಷಗಳಿಗೂ ಹೆಚ್ಚು ಸಮಯದಿಂದ ಯಾವುದೇ ತೊಂದರೆಯಿಲ್ಲದೆ ಗ್ರಾಮೀಣ ನವಾದಾದಲ್ಲಿ ವ್ಯಾಪಾರ ಮಾಡುತ್ತಿದ್ದರು.
ಕೊನೆಯುಸಿರು ಎಳೆಯುವ ಮುನ್ನ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ ಹುಸೇನ್ ಹೇಗೆ ನಾಲ್ಕರಿಂದ ಐದು ಜನರು ತನ್ನನ್ನು ತಡೆದಿದ್ದರು, ತನ್ನ ಜೇಬುಗಳ ತಪಾಸಣೆ ನಡೆಸಿದ್ದರು, ಕೋಣೆಯೊಂದಕ್ಕೆ ಎಳೆದೊಯ್ದು ತನ್ನ ಧಾರ್ಮಿಕ ಗುರುತನ್ನು ಬಹಿರಂಗಗೊಳಿಸುವಂತೆ ಬಲವಂತಗೊಳಿಸಿದ್ದರು ಎನ್ನುವುದನ್ನು ವಿವರಿಸಿದ್ದಾರೆ.
ದುಷ್ಕರ್ಮಿಗಳು ಹುಸೇನ್ ರನ್ನು ಕಬ್ಬಿಣದ ಸರಳುಗಳಿಂದ ಥಳಿಸಿದ್ದರು, ಬೆರಳುಗಳನ್ನು ಮುರಿದಿದ್ದರು, ಎದೆಯನ್ನು ತುಳಿದಿದ್ದರು, ಇಕ್ಕಳದಿಂದ ಕೈಕಾಲುಗಳು ಮತ್ತು ಕಿವಿಗಳನ್ನು ಜಜ್ಜಿದ್ದರು, ಇಟ್ಟಿಗೆಗಳಿಂದ ಹೊಡೆದಿದ್ದರು, ಮೈಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳು ಹುಸೇನ್ ರ ಧರ್ಮವನ್ನು ದೃಢಪಡಿಸಿಕೊಳ್ಳಲು ಅವರ ಪ್ಯಾಂಟ್ ನ್ನು ಬಿಚ್ಚಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ.
ಹುಸೇನ್ ಪತ್ನಿ ಶಬನಂ ಪರ್ವೀನ್ 10 ಹೆಸರಿಸಲಾದ ಮತ್ತು 15 ಅಪರಿಚಿತ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೋಲಿಸರು ಸೋನು ಕುಮಾರ್ ,ರಂಜನ್ ಕುಮಾರ್, ಸಚಿನ್ ಕುಮಾರ್ ಮತ್ತು ಶ್ರೀಕುಮಾರ್ ಎನ್ನುವವರನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದಾಗಿ ಪೋಲಿಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಧಾರ್ಮಿಕ ತಾರತಮ್ಯದಿಂದ ಪ್ರೇರಿತವಾಗಿತ್ತು ಎನ್ನಲಾಗಿರುವ ಈ ದಾಳಿಯು ಬಿಹಾರದ ನೂತನ ಗೃಹಸಚಿವ ಸಾಮ್ರಾಟ್ ಚೌಧರಿ ಅವರ ಅಡಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಕಳವಳಗಳನ್ನು ಹುಟ್ಟುಹಾಕಿದೆ.
2025ರಿಂದ ಹಲವಾರು ಗುಂಪು ದಾಳಿಗಳಿಗೆ ನವಾದಾ ಸಾಕ್ಷಿಯಾಗಿದೆ.