ಬಿಹಾರ್ ವಿಧಾನ ಸಭಾ ಚುನಾವಣೆ | ಎನ್‌ಡಿಎ ಗೆಲುವು ಇಸಿಐ ಪ್ರಾಯೋಜಿತ ಹಗರಣ: ಶಿವಸೇನೆ
Photo Credit: PTI
ಮುಂಬೈ, ನ. 15: ಬಿಹಾರ ವಿಧಾನ ಸಭೆ ಚುನಾವಣೆ ಫಲಿತಾಂಶ ಚುನಾವಣಾ ಆಯೋಗ ಮಾಡಿದ ಮಹಾ ವಂಚನೆ ಎಂದು ಶಿವ ಸೇನೆ (ಯುಬಿಟಿ) ಶನಿವಾರ ಹೇಳಿದೆ.
ಮತಗಳ್ಳತನದ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿದೆ ಎಂದು ಅದು ಹೇಳಿದೆ.
ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಪ್ರಚಂಡ ಗೆಲವು ದಾಖಲಿಸಿದ ದಿನದ ಬಳಿಕ ಶಿವಸೇನೆ, ಮುಖ್ಯಮಂತ್ರಿ ಹುದ್ದೆಗಾಗಿ ಜೆಡಿ(ಯು)ಮೇಲೆ ನಿಯಂತ್ರಣ ಸಾಧಿಸಲು ಕೂಡ ಬಿಜೆಪಿ ಹಿಂಜರಿಯುವುದಿಲ್ಲ ಎಂದಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ಮರಣ ಶಕ್ತಿ ನಷ್ಟದಿಂದ ಬಳಲುತ್ತಿದ್ದಾರೆ ಎಂದು ಹೇಳಿರುವ ಶಿವಸೇನೆ, ಅಂತಹ ಸಮಸ್ಯೆಗಳನ್ನು ಹೊಂದಿರುವವರು ಬಿಹಾರವನ್ನು ಮುನ್ನಡೆಸುವುದು ಹೇಗೆ ಎಂದು ಪ್ರಶ್ನಿಸಿದೆ.
ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನೆ (ಯುಬಿಟಿ), ಮಹಾರಾಷ್ಟ್ರದಂತೆಯೇ ಬಿಹಾರದಲ್ಲಿಯೂ ಬಿಜೆಪಿಯ ಗೆಲುವಿನ ಸೂತ್ರವನ್ನು ನಿರ್ಧರಿಸಲಾಗಿದೆ. ಅಲ್ಲಿ ವಿರೋಧ ಪಕ್ಷವಾದ ಮಹಾ ವಿಕಾಸ ಅಘಾಡಿ 50 ಸ್ಥಾನಗಳನ್ನು ಗೆಲಲ್ಲು ಅವಕಾಶ ನೀಡಿಲ್ಲ ಎಂದು ಹೇಳಿದೆ.
ಬಿಹಾರ ಚುನಾವಣಾ ಫಲಿತಾಂಶ ಅಚ್ಚರಿಪಟ್ಟುಕೊಳ್ಳುವಂತದ್ದಲ್ಲ ಎಂದು ಹೇಳಿರುವ ಶಿವಸೇನೆ, ಅಪೇಕ್ಷಿತ ಫಲಿತಾಂಶ ಪಡೆಯಲು ಬಿಜೆಪಿ ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಬಿಹಾರ ಚುನಾವಣೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಒಂದು ವಂಚನೆ. ಚುನಾವಣಾ ಪ್ರಕ್ರಿಯೆಯ ಕಾವಲುಗಾರನಾಗಿರುವ ಚುನಾವಣಾ ಆಯೋಗವೇ ಕಳ್ಳರಿಗೆ ನೆರವು ನೀಡಿದರೆ, ಜನರು ಯಾರನ್ನು ನಂಬುವುದು ಎಂದು ಶಿವಸೇನೆ ಪ್ರಶ್ನಿಸಿದೆ.