ಬಿಹಾರ ವಿಧಾನಸಭಾ ಚುನಾವಣೆ | ಎನ್ಡಿಎ ಸ್ಥಾನ ಹಂಚಿಕೆ ಪ್ರಕಟ: ಬಿಜೆಪಿ, ಜೆಡಿಯುಗೆ ತಲಾ 101 ಸ್ಥಾನ
ಚಿರಾಗ್ ಪಾಸ್ವಾನ್ ಪಕ್ಷಕ್ಕೆ 29 ಸ್ಥಾನ
Photo Credit: ANI
ಪಾಟ್ನಾ,ಅ.12: ಎನ್ಡಿಎ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ತನ್ನ ಸ್ಥಾನ ಹಂಚಿಕೆ ಸೂತ್ರವನ್ನು ರವಿವಾರ ಅಂತಿಮಗೊಳಿಸಿದೆ. ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ(ರಾಮ ವಿಲಾಸ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಎನ್ಡಿಎ ಘಟಕ ಪಕ್ಷಗಳ ನಡುವೆ ಹಂಚಿಕೆಯಾಗಿರುವ ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ. ಜೆಡಿಯು ಮತ್ತು ಬಿಜೆಪಿ ನಾಯಕರು ಇದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಜೆಡಿಯು:101
ಬಿಜೆಪಿ :101
ಎಲ್ಜೆಪಿ(ರಾಮ್ ವಿಲಾಸ್):29
ರಾಷ್ಟ್ರೀಯ ಲೋಕ ಮೋರ್ಚಾ:6
ಹಿಂದುಸ್ಥಾನಿ ಆವಾಮಿ ಪಾರ್ಟಿ(ಜಾತ್ಯತೀತ):6
2020ರಲ್ಲಿ 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿಯುಗೆ ಇದು ಹಿನ್ನಡೆಯಾಗಿದೆ. 110 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಗೂ ಇದು ಹಿನ್ನಡೆಯಾಗಿದೆ.
ಬಿಹಾರದಲ್ಲಿ ನ.6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನ.14ರಂದು ಮತಗಳ ಎಣಿಕೆ ನಡೆಯಲಿದೆ. ಆರ್ಜೆಡಿ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳನ್ನು ಒಳಗೊಂಡಿರುವ ಪ್ರತಿಪಕ್ಷ ಮಹಾಘಟಬಂಧನ್ ಇನ್ನಷ್ಟೇ ಸ್ಥಾನ ಹಂಚಿಕೆ ಸೂತ್ರವನ್ನು ಪ್ರಕಟಿಸಬೇಕಿದೆ.
ಎನ್ಡಿಎ ಮಿತ್ರಪಕ್ಷಗಳು ಸೌಹಾರ್ದಯುತ ವಾತಾವರಣದಲ್ಲಿ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸಿವೆ. ಎನ್ಡಿಎ ಪಕ್ಷಗಳ ಎಲ್ಲ ಕಾರ್ಯಕರ್ತರು ಮತ್ತು ನಾಯಕರು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಬಿಹಾರ ಸಜ್ಜಾಗಿದೆ ಮತ್ತು ಎನ್ಡಿಎ ಮತ್ತೊಮ್ಮೆ ಸರಕಾರವನ್ನು ರಚಿಸಲಿದೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಜಿತನ್ ರಾಮ್ ಮಾಂಝಿಯವರ ಎಚ್ಎಎಮ್(ಎಸ್) 15 ಸ್ಥಾನಗಳಿಗೆ ಪಟ್ಟುಹಿಡಿದಿತ್ತಾದರೂ ಅದರ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಎನ್ಡಿಎ ನಾಯಕರು ಆರು ವಿಧಾನಸಭಾ ಸ್ಥಾನಗಳು ಮತ್ತು ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಅದನ್ನು ಒಪ್ಪಿಸಿದ್ದಾರೆ.
ಅತ್ತ ಎಲ್ಜೆಪಿ(ಆರ್ವಿ) ಕೂಡ ಕನಿಷ್ಠ 40 ಸ್ಥಾನಗಳಿಗೆ ಪಟ್ಟು ಹಿಡಿದಿತ್ತಾದರೂ ಅಂತಿಮವಾಗಿ 29 ಸ್ಥಾನಗಳಿಗೆ ಒಪ್ಪಿಕೊಂಡಿದೆ. ಇದು ಬಿಜೆಪಿ ಆರಂಭದಲ್ಲಿ ಮುಂದಿರಿಸಿದ್ದ ಸ್ಥಾನಗಳಿಗಿಂತ ನಾಲ್ಕು ಹೆಚ್ಚೇ ಆಗಿದೆ.