×
Ad

ಬಿಹಾರ ಹುಡುಗಿಯರು 25 ಸಾವಿರಕ್ಕೆ ವಿವಾಹಕ್ಕೆ ಲಭ್ಯ: ವಿವಾದ ಸೃಷ್ಟಿಸಿದ ಉತ್ತರಾಖಂಡ ಬಿಜೆಪಿ ಸಚಿವೆ ರೇಖಾ ಆರ್ಯ ಪತಿಯ ಹೇಳಿಕೆ

Update: 2026-01-03 09:10 IST

PC: TOI

ಪಾಟ್ನಾ: ಬಿಹಾರದ ಹುಡುಗಿಯರು ಕೇವಲ 20 ರಿಂದ 25 ಸಾವಿರ ರೂಪಾಯಿಗೆ ವಿವಾಹಕ್ಕೆ ಲಭ್ಯ ಎಂದು ಹೇಳಿಕೆ ನೀಡುವ ಮೂಲಕ ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ಪತಿ ವಿವಾದ ಹುಟ್ಟುಹಾಕಿದ್ದಾರೆ. ಈ ಹೇಳಿಕೆಯನ್ನು ಪಕ್ಷಬೇಧ ಮರೆತು ಎಲ್ಲ ಬಿಹಾರ ರಾಜಕಾರಣಿಗಳು ಖಂಡಿಸಿದ್ದು, ಬಿಹಾರ ರಾಜ್ಯ ಮಹಿಳಾ ಆಯೋಗ ಈ ಹೇಳಿಕೆ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟಿಸ್ ನೀಡಿದೆ. ಇಂಡಿಯಾ ಮೈತ್ರಿಕೂಟದ ಮುಖಂಡರು ಸಚಿವೆಯ ಪತಿ ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದು, ಎನ್ ಡಿಎ ಮಿತ್ರ ಪಕ್ಷಗಳು ಕೂಡಾ ಕಟು ಶಬ್ದಗಳಲ್ಲಿ ಈ ಹೇಳಿಕೆಯನ್ನು ತಿರಸ್ಕರಿಸಿವೆ.

ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ರೇಖಾ ಆರ್ಯ ಅವರ ಪತಿ ಗಿರಿಧರ್ ಲಾಲ್ ಸಾಹು ಯುವಕರ ಗುಂಪಿನೊಂದಿಗೆ ಮಾತನಾಡುವ ವೇಳೆ ಅವರ ವೈವಾಹಿಕ ಸ್ಥಿತಿ ಬಗ್ಗೆ ವಿಚಾರಿಸುತ್ತಾ, ಬಿಹಾರದ ಹುಡುಗಿಯರ ಜತೆಗೆ ಕಡಿಮೆ ವೆಚ್ಚದಲ್ಲಿ ವಿವಾಹ ಸಂಬಂಧ ಏರ್ಪಡಿಸಬಹುದು ಎಂದು ಹೇಳುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೇಳಿಕೆಯನ್ನು ವಿವಿಧ ರಾಜಕೀಯ ಮುಖಂಡರು ಮತ್ತ ಜಾಲತಾಣ ಬಳಕೆದಾರರು ಖಂಡಿಸಿದ್ದಾರೆ.

ಹೇಳಿಕೆಯನ್ನು ಖಂಡಿಸಿರುವ ಆರ್ ಜೆಡಿ ವಕ್ತಾರ ಚಿತ್ತರಂಜನ್ ಗಗನ್, ಸಚಿವೆಯನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪತಿಯನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿಗೆ ಸ್ವಲ್ಪವಾದರೂ ನೈತಿಕತೆ ಹಾಗೂ ಘನತೆ ಇದ್ದರೆ, ಪಕ್ಷ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಕ್ಷಣವೇ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬಿಹಾರದ ಮಹಿಳೆಯರನ್ನು ಹರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಕಾರ್ಯಾಧ್ಯಕ್ಷ ನಿತಿನ್ ನಬೀನ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಬಿಹಾರ ಮಹಿಳೆಯರು ಮಾರಾಟಕ್ಕಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ರಾಥೋಡ್ ಹೇಳಿದ್ದಾರೆ.

ಆಡಳಿತಾರೂಢ ಎನ್ ಡಿಎ ಮುಖಂಡರು ಕೂಡಾ ಹೇಳಿಕೆಯನ್ನು ಟೀಕಿಸಿದ್ದಾರೆ. ಹೇಳಿಕೆ ನೀಡಿರುವ ಸಚಿವೆಯ ಪತಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News