×
Ad

ಬಿಹಾರದ ಫಲಿತಾಂಶ ವಾಸ್ತವಕ್ಕೆ ಹೊಂದಿಕೆಯಾಗುತ್ತಿಲ್ಲ: ದೀಪಾಂಕರ್ ಭಟ್ಟಾಚಾರ್ಯ ಗಂಭೀರ ಆರೋಪ

Update: 2025-11-14 23:42 IST

Photo: thehindu

ಪಾಟ್ನಾ, ನ.14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಜ್ಯದ ವಾಸ್ತವತೆಗೆ ಯಾವುದೇ ರೀತಿಯಲ್ಲಿ ಹೊಂದಿಕೆಯಾಗುತ್ತಿಲ್ಲ ಎಂದು ಸಿಪಿಐ(ಎಂಎಲ್) ಲಿಬರೇಶನ್ ನ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

ಎರಡು ದಶಕಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರವು 2010ರ ಸಾಧನೆಯನ್ನು ಮರುಕಳಿಸಿದಂತೆ ತೋರುತ್ತಿರುವ ಈ ಫಲಿತಾಂಶವು ಅಸ್ವಾಭಾವಿಕ ಎಂದು ಅವರು ಹೇಳಿದ್ದಾರೆ.

“ಫಲಿತಾಂಶಗಳು ಸಂಪೂರ್ಣವಾಗಿ ಅಸ್ವಾಭಾವಿಕ. ಬಿಹಾರದ ವಾಸ್ತವಕ್ಕೆ ಇದು ಹೊಂದಿಕೆಯಾಗುವುದಿಲ್ಲ” ಎಂದು ಪಿಟಿಐಗೆ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.

ಮತದಾರರ ಸಂಖ್ಯೆಯಲ್ಲಿನ ಗೊಂದಲವನ್ನೂ ಉಲ್ಲೇಖಿಸಿದ ದೀಪಾಂಕರ್, ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ನಂತರ ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 7.42 ಕೋಟಿ ಹೆಸರುಗಳಿದ್ದರೆ, ಚುನಾವಣೆಯ ನಂತರ ಬಿಡುಗಡೆಗೊಂಡ ಚುನಾವಣಾ ಆಯೋಗದ ಪತ್ರಿಕಾ ಪ್ರಕಟನೆಯಲ್ಲಿ 7,45,26,858 ಮತದಾರರಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದರು.

“ಮೂರು ಲಕ್ಷಕ್ಕೂ ಹೆಚ್ಚಿನ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ! ಈ ‘ಹೆಚ್ಚುವರಿ’ ಮತದಾರರು ಎಲ್ಲಿಂದ ಬಂದರು? ಈ ಬಗ್ಗೆ ಚುನಾವಣಾ ಆಐಗವು ಸ್ಪಷ್ಟನೆ ನೀಡುವುದಿಲ್ಲವೇ?” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.

ಈ ಬಾರಿ ಮಹಾಘಟಬಂಧನ್‌ ನ ಭಾಗವಾಗಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ(ಎಂಎಲ್) ಲಿಬರೇಶನ್, ಮಧ್ಯಾಹ್ನದ ವೇಳೆಗೆ ಘೋಸಿ ಎಂಬ ಒಂದೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿತ್ತು. 2020ರ ಚುನಾವಣೆಯಲ್ಲಿ ಪಕ್ಷವು 19 ಸ್ಥಾನಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳನ್ನು ಗೆದ್ದಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News