×
Ad

ಮುಸ್ಲಿಮರನ್ನು ಸಿಲುಕಿಸುವ ಸಂಚು ತನಿಖೆಯಲ್ಲಿ ಬಹಿರಂಗ: ಜೀವ ಬೆದರಿಕೆ ಪ್ರಕರಣ ಹಿಂಪಡೆದ ಬಿಜೆಪಿ ಸಂಸದ ನಿಶಿಕಾಂತ ದುಬೆ

Update: 2025-09-04 17:00 IST

ನಿಶಿಕಾಂತ್ ದುಬೆ (Photo: PTI)

ಹೊಸದಿಲ್ಲಿ: ತನಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಿ 2018ರಲ್ಲಿ ದಾಖಲಿಸಿದ್ದ ಪ್ರಕರಣವನ್ನು ತಾನು ಹಿಂದೆಗೆದುಕೊಂಡಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ(ಗೊಡ್ಡಾ) ಅವರು ಬುಧವಾರ ತಿಳಿಸಿದ್ದಾರೆ.

ಜಾರ್ಖಂಡ್‌ನ ಸಾಹಿಬ್‌ಗಂಜ ಜೈಲಿನಲ್ಲಿಯ ಕೈದಿಯೋರ್ವ ತನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದುಬೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ದಿಲ್ಲಿ ಪೋಲಿಸರು ಜುಲೈ 2018ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಗೊಡ್ಡಾ ಜಿಲ್ಲೆಯ ಕುಮರಧಿ ನಿವಾಸಿ ಕುಂದನ ಕುಮಾರ ದಾಸ್ ಎಂಬಾತ ತನಗೆ ಬೆದರಿಕೆಯೊಡ್ಡಿದ್ದ ಮತ್ತು ಕೆಲವು ಮುಸ್ಲಿಮ್ ಯುವಕರನ್ನು ಪ್ರಕರಣದಲ್ಲಿ ಸಿಲುಕಿಸಲು ಸಂಚು ಹೂಡಿದ್ದ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ ಎಂದು ದುಬೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದುಬೆ ಪ್ರಕಾರ ಅವರಿಗೆ ಕರೆ ಮಾಡಲು ಬಳಸಲಾಗಿದ್ದ ಮೊಬೈಲ್‌ನ್ನು ಮುಹಮ್ಮದ್ ಗುಲ್ಫಾಮ್ ಹೆಸರಿನಲ್ಲಿ ಖರೀದಿಸಲಾಗಿತ್ತು.

ಬುಧವಾರ ತಾನು ದಿಲ್ಲಿ ಉಚ್ಚ ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ಹಾಜರಾಗಿ ಪ್ರಕರಣವನ್ನು ವಜಾಗೊಳಿಸುವಂತೆ ಪೀಠವನ್ನು ಕೋರಿದ್ದೆ ಎಂದು ಹೇಳಿರುವ ದುಬೆ,‌ ಉಚ್ಚ ನ್ಯಾಯಾಲಯವು 10,000 ರೂ.ಗಳ ದಂಡ ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗಬಾರದು ಎಂಬ ಆದೇಶದೊಂದಿಗೆ ಪ್ರಕರಣವನ್ನು ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.

ತನಗೆ ಬೆದರಿಕೆ ಕರೆಯನ್ನು ಮಾಡಿದ್ದ ವ್ಯಕ್ತಿ ಈ ಹಿಂದೆ ಗೊಡ್ಡಾದಲ್ಲಿ ಜಾನುವಾರು ಕಳ್ಳತನದ ಶಂಕೆಯಿಂದ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳ ಕಾನೂನು ವೆಚ್ಚಗಳನ್ನು ಭರಿಸಿದ್ದಕ್ಕಾಗಿ ತನ್ನನ್ನು ನಿಂದಿಸಿದ್ದಾನೆ ಎಂದು ದುಬೆ ಹೇಳಿಕೊಂಡಿದ್ದರು.

ಜೂನ್ 2018ರಲ್ಲಿ ಐವರ ಗುಂಪೊಂದು ದುಲು ಗ್ರಾಮದಿಂದ 12 ಎಮ್ಮೆಗಳನ್ನು ಕದ್ದಿದೆ ಎಂಬ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಕೊಲ್ಲಲಾಗಿತ್ತು. ಅವರನ್ನು ಗ್ರಾಮಸ್ಥರು ಬೆನ್ನಟ್ಟಿದ್ದು, ಮೂವರು ತಪ್ಪಿಸಿಕೊಂಡರೆ ಮುರ್ತಜಾ ಅನ್ಸಾರಿ ಮತ್ತು ಚರ್ಕು ಅನ್ಸಾರಿ ಗುಂಪಿನ ಕೈಗೆ ಸಿಕ್ಕಿಬಿದ್ದಿದ್ದರು. ಕಾಣೆಯಾಗಿದ್ದ ಎಮ್ಮೆಗಳು ಅವರ ಬಳಿ ಪತ್ತೆಯಾಗಿದ್ದು,ಅವರನ್ನು ಹೊಡೆದು ಕೊಂದಿದ್ದಾಗಿ ಗ್ರಾಮಸ್ಥರು ಹೇಳಿಕೊಂಡಿದ್ದರು.

ಎರಡು ದಿನಗಳ ಬಳಿಕ, ಪ್ರಕರಣದಲ್ಲಿ ಬಂಧಿತ ನಾಲ್ವರನ್ನು ಅನ್ಯಾಯವಾಗಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹೇಳಿದ್ದ ದುಬೆ, ಇಡೀ ಗ್ರಾಮವೇ ಎಮ್ಮೆಗಳ್ಳರನ್ನು ಥಳಿಸಿತ್ತು. ಈ ನಾಲ್ವರ ಎಮ್ಮೆಗಳು ಕಳುವಾಗಿದ್ದವು ಎಂಬ ಕಾರಣಕ್ಕೆ ಮಾತ್ರ ಅವರನ್ನೇಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News